ವರದಿ: ಕೆ.ಟಿ.ಮೋಹನ್ ಕುಮಾರ್



ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನದ ಶ್ರೀ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿಗಳು ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯಕ್ಕೆ ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ಆರು ಅಡಿ ಉದ್ದದ, 4ಅಡಿ ಅಗಲ ಇರುವ, ಐದು ಅಡಿ ಎತ್ತರದ ಆದಿಶೇಷನಲ್ಲಿ ಯೋಗಾ ನಿದ್ರೆಯಲ್ಲಿ ಮಲಗಿರುವ ರೂಪದಲ್ಲಿರುವ ಶ್ರೀರಂಗನಾಥಸ್ವಾಮಿ ಅವರ ಪಾದಗಳಲ್ಲಿ ಗೋದಾದೇವಿ ಎಂದರೆ ಮಹಾಲಕ್ಷ್ಮಿ ಸ್ವರೂಪದ ದೇವರ ಶಿಲಾಮೂರ್ತಿಯನ್ನು ಉದಾರವಾಗಿ ಮಾಡಿಸಿ ಗ್ರಾಮಕ್ಕೆ ಸಮರ್ಪಣೆ ಮಾಡಿದರು.
ಸಾಲಿಗ್ರಾಮ ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳು ಹಾಗೂ ಪೂರ್ಣ ಕುಂಭ ಕಳಸಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ದೇವರ ಮೂರ್ತಿಯನ್ನು ಮೆರವಣಿಗೆ ಸಾಗಿ ಮೂಡಲಬೀಡು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ವರುಣನ ಆಗಮನದಿಂದ ಸ್ವಾಮೀಜಿಗಳು, ಭಕ್ತರು, ಗ್ರಾಮಸ್ಥರು ದೇವರಿಗೆ ಜಯ ಘೋಷಣೆಗಳನ್ನು ಮೊಳಗಿಸಿ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಶ್ರೀ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿಗಳು ಮಾತನಾಡಿ ಮೂಡಲಬೀಡು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯಕ್ಕೆ ಆದಿಶೇಷನೊಂದಿಗೆ ಶ್ರೀ ರಂಗನಾಥ ಸ್ವಾಮಿ ಮಹಾಲಕ್ಷ್ಮಿ ಇರುವ ಶಿಲಾಮೂರ್ತಿಯನ್ನು ಮಾಡಿಸಿಕೊಡುವ ಅವಕಾಶ ನಮಗೆ ದೊರಕಿದ್ದು ನಮ್ಮ ಸೌಭಾಗ್ಯವಾಗಿದೆ ಎಂದರು.
ವೈಕುಂಠ ಏಕಾದಶಿ ಎಂದರೆ ಶ್ರೀ ರಂಗನಾಥ ಸ್ವಾಮಿ ದೇವರಿಗೆ ತುಂಬಾ ವಿಶೇಷ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಕೂಡ ವೈಕುಂಠ ಏಕಾದಶಿ ತುಂಬಾ ಶ್ರೇಷ್ಠವಾಗಿ ನಡೆಯುತ್ತದೆ. ಈ ಭಾಗದಲ್ಲಿ ಈ ತರಹದ ಒಂದು ದೇವರ ಶಿಲಾ ಮೂರ್ತಿ ಇರುವುದು ಅತ್ಯಂತ ವಿಶೇಷವಾಗಿದ್ದು. ಸದ್ಭಕ್ತರು ದೇವರ ದರ್ಶನವನ್ನು ಪಡೆಯಬೇಕೆಂದರು. ದೇವರು ನಾಡಿಗೆ ಮಳೆ, ಬೆಳೆ ಚೆನ್ನಾಗಿ ಆಗುವಂತೆ ಮಾಡಿ ನಾಡಿನ ಜನತೆಗೆ ಒಳಿತು ಮಾಡಲೆಂದು ಪ್ರಾರ್ಥಿಸುತ್ತೇವೆ ಎಂದರು.
ಗ್ರಾಮಸ್ಥರುಗಳು ಮಾತನಾಡಿ ದೇವಾಲಯಕ್ಕೆ ನೂತನವಾಗಿ ದೇವರ ಶಿಲಾಮೂರ್ತಿಯನ್ನು ಮಾಡಿಸಿಕೊಟ್ಟಂತಹ ಶ್ರೀ ಭಾಷ್ಯಕಾರ ಸ್ವಾಮಿ ದೇವಾಲಯದ ಶ್ರೀ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿಗಳನ್ನು ಅಭಿನಂದಿಸಿದರು.
ಈ ದೇವತಾ ಕಾರ್ಯದಲ್ಲಿ ಮೂಡಲಿಬೀಡು ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.