ಚಾಮರಾಜನಗರ: ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕರ್ನಾಟಕ ರಾಜ್ಯರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ
ಕೆಲ್ಲಂಬಳ್ಳಿ ಸೋಮನಾಯಕ ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2026 ಅಕ್ಟೋಬರ್, 1 ರಿಂದ ಪೋಡಿ, ಹದ್ದುಬಸ್ತು, 11ಇ ಮತ್ತು ಅಲಿನೇಷನ್ ಸೇರಿದಂತೆ ಇತರೆ ಜಮೀನು ಅಳತೆಗಳಿಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಆಕ್ಟೋಬರ್ 1 ರಿಂದ ಅನ್ವಯವಾಗುವಂತೆ ದರ ಪರಿಷ್ಕರಿಸಿ, ಸರ್ಕಾರ ಆದೇಶ ಹೊರಡಿಸಿದೆ. ರೈತರ ಜೇಬಿಗೆ ಕತ್ತರಿ ಹಾಕಿದ್ದಾರೆ. ಭೂಮಾಪನ ಇಲಾಖೆ ಆಯುಕ್ತರು ಪ್ರಸ್ತಾವನೆ ಹಿನ್ನಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ-ಭೂಮಾಪನ) ಎಂ.ಎ.ಮಹಾಲಕ್ಷ್ಮಿ ರವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದಾರೆ. ಪ್ರತ್ಯೇಕ ದರ ರಾಜ್ಯದ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕವಾಗಿ ಅರ್ಜಿಶುಲ್ಕ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಹಿಂದಿನ ದರಕ್ಕಿಂತ ಸರಾಸರಿ ಒಂದು ಸಾವಿರ ರೂಪಾಯಿಗಳನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ. 11ಇ ಅಲಿನೇಷನ್ ಪೂರ್ವ ನಕ್ಷೆ ತತ್ಕಲ್ ಪೋಡಿಗೆ ಸಂಬಂಧಿಸಿದ 2 ಎಕರೆ ವರೆಗಿನ ಜಮೀನುಗಳಿಗೆ ನಗರ ಪ್ರದೇಶದಲ್ಲಿ 3,200 ರೂ.ಗಳನ್ನು ನಿಗದಿ ಮಾಡಿದ್ದಾರೆ. ಇದುವರೆಗೆ 2000- ರೂ.ಗಳು ಇತ್ತು. ಗ್ರಾಮೀಣ ಪ್ರದೇಶದಲ್ಲಿ 1500.ರೂ.ಗಳು ಇದ್ದುದ್ದನ್ನು 2300ರೂ.ಗಳಿಗೆ ಹೆಚ್ಚಿಸಲಾಗಿದೆ. 2 ಎಕರೆಗೆ ಮೇಲ್ಪಟ್ಟು ಪ್ರತಿ ಎಕರೆ ಜಮೀನಿಗೆ ನಗರ ಪ್ರದೇಶದಲ್ಲಿ 1000 ರೂ.ಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 400 ರೂ.ಗಳು ಹೆಚ್ಚುವರಿ ಕಟ್ಟಬೇಕು. ಕಂದಾಯ ಸಚಿವರಾದ ಕೃಷಭೈರೇಗೌಡರು ಒಂದು ಸರ್ವೆ ನಂಬರಿನ ಅಟ್ಲಾಸ್, ಟೀಪಾನಿ, ಎಡಬಲ ಕಾಪಿ ಸಂಬಂಧಪಟ್ಟ ಎಲ್ಲಾ ದಾಖಲಾತಿಗೆ ಕೇವಲ ಬರೀ 35 ರೂ.ಗಳು ಎಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದರು. ಆದರೆ ಈವಾಗ ನಗರ ಪ್ರದೇಶಗಳಿಗೆ ಹದ್ದುಬಸ್‌ಗೆ 3500 ರೂ.ಗಳು ಇತ್ತು. ಗ್ರಾಮೀಣ ಪ್ರದೇಶಗಳಿಗೆ 2300 ರೂ.ಗಳು ಹೆಚ್ಚಿಸಲಾಗಿದೆ. ಆದ್ದರಿಂದ ರೈತರು ಬದುಕುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಮಗೆ ಖಾಸಗಿ ಭೂಮಾಪಕರು ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲವಾಗಲು ಸರ್ಕಾರಿ ಭೂಮಾಪಕರು ಕೆಲಸ ನಿರ್ವಹಿಸಿಕೊಡಬೇಕೆಂದು ಸಾರ್ವಜನಿಕರು ಹಾಗೂ ರೈತರ ಪರವಾಗಿ ನಗರ ಪ್ರದೇಶಗಳಿಗೂ ಮತ್ತು ಗ್ರಾಮೀಣ ಪ್ರದೇಶಗಳಿಗೂ ಹಳೆ ದರ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಸರಿಯಾಗಿ ಜನರಿಗೆ ತಲುಪಿಸದೆ ಸಂಪೂರ್ಣ ವಿಫಲವಾಗಿದೆ. ಹಾಗೂ ವೃದ್ಧಾಪ್ಯ, ಅಂಗವಿಕಲ, ಸಂದ್ಯಾಸುರಕ್ಷಾ ಇನ್ನಿತರ ವೇತನವನ್ನು ನೀಡದೇ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಧೀನದಲಿತರಿಗೆ, ಮಹಿಳೆಯರಿಗೆ ತುಂಬಾ ಅನ್ಯಾಯ ಮಾಡಿರುತ್ತಾರೆ ಮತ್ತು ರಾಜ್ಯ ಸರ್ಕಾರವು ಬಸ್‌ನ ದರವನ್ನು ಹಾಗೂ ಹಾಲಿನ ದರವನ್ನು ಹೆಚ್ಚಳ ಮಾಡುತ್ತಿರುವುದರಿಂದ ಗ್ರಾಹಕರಿಗೆ ತುಂಬಾ ಅನ್ಯಾಯ ಮಾಡಿದಂತಾಗಿಗುತ್ತದೆ. ಹಾಗಾಗಿ ಹಾಲಿನ ದರವನ್ನು ಹೆಚ್ಚಳ ಮಾಡುತ್ತಿರುವುದರಿಂದ ಗ್ರಾಹಕ ಹಾಗೂ ರೈತರಿಗೆ ಸಮನಾಗಿ ಅನುಕೂಲವಾಗುವಂತೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಮಿತಿ ರಾಜ್ಯಾಧ್ಯಕ್ಷರಾದ ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾಧ್ಯಕ್ಷರಾದ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ಎಂ.ಶಂಕರ್, ಪಣ್ಯದಹುಂಡಿ ರಾಜಣ್ಣ, ಕಾಳನಹುಂಡಿ ಮಲ್ಲಿಕ್, ರಾಮಸಮುದ್ರ ಲಿಂಗರಾಜು, ಹೆಗ್ಗೋಠಾರ ಮಂಜು, ಪ್ರವೀಣ್ ಹಾಜರಿದ್ದರು.