ಚಾಮರಾಜನಗರ : ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಚ್ಚು ಹಬ್ಬಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗ್ ರವರ ತ್ಯಾಗ ಬಲಿದಾನ ಸ್ಥೈರ್ಯ ಸಾಹಸವನ್ನು ಯುವಕರು ಆದರ್ಶವಾಗಿ ಇಟ್ಟುಕೊಂಡಾಗ ರಾಷ್ಟ್ರ ಮುನ್ನಡೆಸಲು ಸಾಧ್ಯವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಅಮಚವಾಡಿ ಯುವಕರ ಸಂಘ ಮತ್ತು ಅಮಚವಾಡಿ ರೆಡ್ ಬುಲ್ಸ್ ಕಬಡ್ಡಿ ತಂಡದ ವತಿಯಿಂದ ಕಬ್ಬಡ್ಡಿ ಮೈದಾನದಲ್ಲಿ ಆಚರಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಗತ್ ಸಿಂಗ್ ಬಾಲ್ಯದಲ್ಲಿಯೇ ಬ್ರಿಟಿಷರ ದೌರ್ಜನ್ಯವನ್ನು ಕಣ್ಣಾರೆ ಕಂಡವರು . ಜಲಿಯನ್ ವಾಲಾಬಾಗ್ ನ ದುರಂತದ ಸಾವು ನೋವುಗಳು ಭಗತ್ ಸಿಂಗ್ ಗೆ ಬ್ರಿಟಿಷರ ಬಗ್ಗೆ ದ್ವೇಷ ಭಾವನೆ ಮೂಡಿ ನಂತರ ಕ್ರಾಂತಿಕಾರಿಯಾಗಿ, ವಿದ್ಯಾರ್ಥಿ ಜೀವನದಲ್ಲಿಯೇ ಕ್ರಾಂತಿಕಾರಿ ಗುಪ್ತ ಸಂಘಗಳ ಸದಸ್ಯರಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದರು.

ಕ್ರಾಂತಿಕಾರಿ ಪತ್ರಿಕೆ ಪ್ರತಾಪ್ ನಲ್ಲಿ ಕ್ರಾಂತಿಕಾರಿ ಲೇಖನಗಳನ್ನು ಬರೆದು ಯುವ ಜನಾಂಗಕ್ಕೆ ಸ್ಪೂರ್ತಿಯನ್ನು ತುಂಬಿದವರು.ಚಂದ್ರಶೇಖರ ಆಜಾದ್, ಕುಂದನ್ ಲಾಲ್ ಸಂಪರ್ಕ ಪಡೆದ ಭಗತ್ ಸಿಂಗ್ ನವ ಜವಾನ್ ಭಾರತ್ ಸಭಾ ಕ್ರಾಂತಿಕಾರಿ ಸಂಘವನ್ನು ಸೇರಿದವರು. ಪಂಜಾಬಿನ ಸಿಂಹ ಎಂದೇ ಖ್ಯಾತರಾದ ಲಾಲಾಲಜಪತ್ ರಾಯ್ ರವರ ಮೇಲೆ ಬ್ರಿಟಿಷರು ದೌರ್ಜನ್ಯ ಮಾಡಿ ಮರಣ ಹೊಂದಿದ ಘಟನೆಯಿಂದ ನೊಂದ ಭಗತ್ ಸಿಂಗ್ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡುವ ಸಂಚು ಹೂಡಿದರು.ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ನನ್ನು ಗಾಯಗೊಳಿಸಿದರು. ಸೆಂಟ್ರಲ್ ಹಾಲ್ ಮೇಲೆ ಬಾಂಬ್ ಸ್ಫೋಟಿಸಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಬಂಧನಕ್ಕೆ ಒಳಗಾಗಿ, ಸೆರೆಮನೆಯಲ್ಲಿ ರಾಜಕೀಯ ಕೈದಿಗಳಿಗೆ ನೀಡುತ್ತಿದ್ದ ಚಿತ್ರ ಹಿಂಸೆ ಮತ್ತು ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದು ಉಪವಾಸ ಸತ್ಯಾಗ್ರಹ ಮಾಡಿ ಭಾರತೀಯ ಹೋರಾಟಗಾರರಿಗೆ ಸ್ಪೂರ್ತಿಯನ್ನು ತಂದಂತವರು ಭಗತ್ ಸಿಂಗ್. ಭಗತ್ ಸಿಂಗ್ ಜೊತೆಗೆ ರಾಜಗುರು ಮತ್ತು ಸುಖದೇವರವರನ್ನು ಗಲ್ಲಿಗೇರಿಸಿದ ಬ್ರಿಟಿಷರ ಕ್ರೂರ ದಬ್ಬಾಳಿಕೆ ಅಂತಿಮಗೊಳ್ಳಲು ನಂತರ ನಡೆದ ಸ್ವಾತಂತ್ರ್ಯ ಚಳುವಳಿ ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳ ಸ್ಪೂರ್ತಿಯೇ ಕಾರಣ.
ಯುವಶಕ್ತಿ ಸದಾಕಾಲ ಕ್ರಿಯಾಶೀಲರಾಗಿ ಶಿಕ್ಷಣ, ಸಂಘಟನೆ,ಸಮಾಜ ಮತ್ತು ದೇಶವನ್ನು ಪ್ರೀತಿಸಿ. ಕ್ರೀಡೆಯ ಬಗ್ಗೆಯೂ ಹೆಚ್ಚು ಗಮನವನ್ನು ಇಟ್ಟುಕೊಂಡು ಸಾಧನೆಯನ್ನು ಮಾಡಲು ಯುವಶಕ್ತಿ ಸದಾಕಾಲ ಶಕ್ತಿಯುತವಾಗಿ ಬೆಳೆಯಬೇಕು. ವ್ಯಸನಗಳಿಗೆ ಬಲಿಯಾಗದೆ ಕ್ರೀಡಾಮನೋಭಾವ, ಸಾಂಸ್ಕೃತಿಕ ಚಿಂತನೆ ಮತ್ತು ದೇಶದ ಬಗ್ಗೆ ಗೌರವ ಇಟ್ಟುಕೊಳ್ಳುವ ಮೂಲಕ ಸಜ್ಜನರಾಗಿ ಬಾಳೋಣ ಎಂದು ತಿಳಿಸಿದರು.
ಅಮಚವಾಡಿಯ ರೆಡ್ ಬುಲ್ಸ್ ಕಬಡ್ಡಿ ತಂಡದ ನಾಯಕ ಪ್ರಸಾದ್ ರವರನ್ನು ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕಬಡ್ಡಿಯ ಸಾಧನೆಗೆ ಋಗ್ವೇದಿ ಯವರು ಗೌರವಿಸಿ ಅಭಿನಂದಿಸಿ ಸನ್ಮಾನಿಸಿದರು .
ಜಿಲ್ಲಾ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ ಭಗತ್ ಸಿಂಗ್ ರಂತಹ ದೇಶಭಕ್ತರ ಜನ್ಮದಿನದ ಅಂಗವಾಗಿ ಕ್ರೀಡಾ ಸಾಧಕರನ್ನು ಗೌರವಿಸುತ್ತಿರುವುದು ಬಹಳ ಹೆಮ್ಮೆಯಾಗಿದೆ. ಯುವಕರಿಗೆ ದೇಶಭಕ್ತರ ಚಿಂತನೆಗಳು ಸಾಧನೆಗಳು ಮಾದರಿಯಾಗಬೇಕು.
ದೇಶಕ್ಕಾಗಿ ದುಡಿದ ನೂರಾರು ಯುವ ಶಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಕಾರ್ಯವನ್ನು ಮಾಡೋಣ ಎಂದರು.
ಅಮಚವಾಡಿ ಕಬ್ಬಡಿ ತಂಡದ ಕುಮಾರ್, ಸಂಜು, ಮಹೇಂದ್ರ, ಪ್ರಸಾದ್, ಗಜೇಂದ್ರ,ಮನು, ಕೆಂಪರಾಜು ಯುವ ಸಂಘಟನೆಯ ದೊಡ್ಡ ಮೊಳೆ ಸುರೇಶ್, ಶಿವರಾಂ, ಬಸವಣ್ಣ ರಮೇಶ್ ಮುಂತಾದವರು ಇದ್ದರು.