- ಕರ್ನಾಟಕ ಏಕೀಕರಣ ಅಮೃತ ಮಹೋತ್ಸವ ಕಾರ್ಯಕ್ರಮ
ಚಾಮರಾಜನಗರ : ಕನ್ನಡ ಹೋರಾಟಗಾರರ ನಿರಂತರ ಶ್ರಮದಿಂದ ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯು ಗಟ್ಟಿಯಾಗಿ ಉಳಿದುಕೊಂಡಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಡೆದ ಕರ್ನಾಟಕ ಏಕೀಕರಣ ಆಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯು ಕೇರಳ, ತಮಿಳುನಾಡು ರಾಜ್ಯಗಳ ಭಾಷೆಗಳ ಪ್ರಭಾವ ಹೆಚ್ಚಾಗಿದ್ದರೂ ಕೂಡ ಜಿಲ್ಲೆಯ ಕನ್ನಡಪರ ಹೋರಾಟಗಾರರ ನಿರಂತರ ಚಳವಳಿಗಳು ಕನ್ನಡವನ್ನು ಜೀವಂತವಾಗಿಟ್ಟಿದೆ. ನವೆಂಬರ್ ತಿಂಗಳು ಅಲ್ಲ ನಮಗೆ ಇಡೀ ವರ್ಷವು ರಾಜ್ಯೋತ್ಸವ ಆಗಿದೆ ಎಂದರು.
ಚಾಮರಾಜನಗರದಲ್ಲಿ. ಕೇರಳ, ತಮಿಳುನಾಡು ರಾಜ್ಯಗಳ ಗಡಿಗಳನ್ನು ಹೊಂದಿಕೊಂಡಿದ್ದರೂ ಜಿಲ್ಲೆಯ ಜನತೆ ಕನ್ನಡವನ್ನು ಬಿಟ್ಟು ಕೊಟ್ಟಿಲ್ಲ. ಕನ್ನಡ ಅಭಿಮಾನ ಸಮೃದ್ಧಿಗೊಳಿಸಿದ್ದಾರೆ. ನಿಮ್ಮ ಹೋರಾಟ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾತನಾಡಿ, ಕರ್ನಾಟಕ ಏಕೀಕರಣ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳಲ್ಲಿ ಮಾಡುವ ಮೂಲಕ ಕನ್ನಡಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳು ಯುವಜನತೆಗೆ ತಲುಪಬೇಕು ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, 1956 ನವೆಂಬರ್ 1 ರಂದು ಕರ್ನಾಟಕ ಏಕೀಕರಣವಾಯಿತು.ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಕಾವೇರಿಯಿಂದ ಗೋದಾವರಿವರೆಗೂ ವಿಸ್ತರಿಸಿಕೊಂಡಿತು. ಬ್ರಿಟಿಷರು ಭಾರತಕ್ಕೆ ಬಂದ ನಂತರದಲ್ಲಿ ಆಡಳಿತದ ದೃಷ್ಠಿಯಿಂದ ಕರ್ನಾಟಕವನ್ನು ಛಿದ್ರ ಮಾಡಿದರು. ನಂತರ ಕರ್ನಾಟಕ ಏಕೀಕರಣ ಚಳವಳಿ ಆರಂಭವಾಯಿತು ಎಂದರು.
ಸನ್ಮಾನ: ನಗರಸಭಾ ಪೌರಾಯುಕ್ತ ಪರಶುರಾಮ್ ಛಲವಾದಿ, ಉದ್ಯೋಗಾಧಿಕಾರಿ ಮಹಮ್ಮದ್ಅಕ್ಬ ರ್, ಬ್ರೈಟ್ ಕಾಲೇಜು ಪ್ರಾಂಶುಪಾಲ ಎಸ್.ಪಿ. ಪ್ರಜ್ವಲ್ ಕುಮಾರ್, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಮಸಣಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ನಾಯಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ,ಪಣ್ಯದಹುಂಡಿ ರಾಜು,
ಚಾ.ವೆಂ.ರಾಜ್ ಗೋಪಾಲ್,ಉದ್ಯಮಿ ಶ್ರೀನಿಧಿಕುದರ್. ನಿಜಧ್ವನಿಗೋವಿಂದರಾಜು, ಅರುಣ್ ಕುಮಾರ್ ಗೌಡ, ಹೊಮ್ಮಲೋಕೇಶ್, ಜಗದೀಶ್, ರಾಚಪ್ಪ, ಆಟೋ ಲಿಂಗರಾಜು. ಇತರರು ಹಾಜರಿದ್ದರು.
