(H.P.Naveen Kumar)
ಮೈಸೂರು : ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಶಿವನಿಗೆ ಪೂಜೆ ಸಲ್ಲಿಸಿ ನೂರಾರು ಜನರಿಗೆ ಅನ್ನದಾನ ಮಾಡಲಾಯಿತು.
ಸಂಸ್ಥೆಯ ಮುಂದೆ ಪ್ರತಿಷ್ಠಾಪಿಸಲಾಗಿದ್ದ ಶಿವನ ಮೂರ್ತಿಗೆ ಪುರೋಹಿತರಾದ ಸಾಗರ್ ಶರ್ಮ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಲೋಕ ಕಲ್ಯಾಣಾರ್ಥ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಎಸ್.ಬಸವರಾಜು, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣುಮೆ ದಿನ ನಮ್ಮ ಸಂಸ್ಥೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನದಾನ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಅನ್ನದಾನ ಮಾಡುವುದು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದಾಯಕ ಕಾರ್ಯ ಎಂದು ಪರಿಗಣಿಸಲಾಗಿದೆ. ಹಸಿದವರಿಗೆ ಅನ್ನ ನೀಡುವುದು ಕೇವಲ ಧಾರ್ಮಿಕ ವಿಧಿಯಲ್ಲ, ಅದು ಅತ್ಯುನ್ನತ ಸಾಮಾಜಿಕ ಹಾಗೂ ಮಾನವೀಯ ಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹುಣ್ಣಿಮೆ ದಿನವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ದಿನವಾಗಿದ್ದು, ಈ ದಿನ ದೇವರ ಸ್ಮರಣೆ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಪ್ರಕೃತಿ ಮತ್ತು ಮನುಷ್ಯನ ಮನಸ್ಸಿನ ಮೇಲೆ ಹುಣ್ಣಿಮೆಯು ತರುವ ಬದಲಾವಣೆಗಳನ್ನು ಎದುರಿಸಲು ಭಕ್ತಿ, ಪೂಜೆ ಅಗತ್ಯವಾಗಿದೆ. ಹುಣ್ಣಿಮೆಯ ದಿನಗಳಲ್ಲಿ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುವಂತೆ, ಮನುಷ್ಯನ ಮನಸ್ಸಿನಲ್ಲಿಯೂ ಭಾವನೆಗಳ ಏರಿಳಿತಗಳು ಹೆಚ್ಚಾಗುತ್ತವೆ ಎಂದು ನಂಬಲಾಗುತ್ತದೆ. ಈ ಸಮಯದಲ್ಲಿ ಶಾಂತರಾಗಿರಲು ತಾಳ್ಮೆ ಅತಿ ಮುಖ್ಯ. ನಮ್ಮ ಶಿಬಿರಾರ್ಥಿಗಳ ಮನಸ್ಸು ಕೂಡ ಯಾವುದೇ ಪರಿಸ್ಥಿತಿಯಲ್ಲೂ ಶಾಂತವಾಗಿರಲಿ ಎಂದು ಪೂಜೆ, ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಚಿತ್ರ : ಹುಣ್ಣಿಮೆ ಹಿನ್ನೆಕೆ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಶೇಷ ಪೂಜೆ ಮತ್ತು ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್. ಬಸವರಾಜು ಇದ್ದಾರೆ.
