- ಯುವ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷರಾಗಿ ರಾಘವೇಂದ್ರ ಅಧಿಕಾರ ಸ್ವೀಕಾರ

ಚಾಮರಾಜನಗರ : ಯುವ ಕನ್ನಡಿಗರ ಸೇನೆಯು ವರ್ಷಪೂರ್ತಿ ಕನ್ನಡ ಕಟ್ಟುವುದು, ನೆಲ, ಜಲ, ಭಾಷೆ ಕಾಯುವ ಕೆಲಸ ಮಾಡುತ್ತಿದೆ ಎಂದು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ನೆ ಲ ರಾಮ್ ಪ್ರಸಾದ್ ಗೌಡ ಹೇಳಿದರು.
ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಯುವ ಕನ್ನಡಿಗರ ಸೇನೆ ಜಿಲ್ಲಾ ಘಟಕದ ಬೃಹತ್ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘಟನೆಗೆ ಸೇರ್ಪಡೆಯಾದವರಿಗೆ ಪಕ್ಷದ ಶಲ್ಯ ಹಾಕಿ ಸ್ವಾಗತಿಸಿ ಬರಮಾಡಿ ಕೊಂಡು ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಎಂದರೆ ಮೈರೋಮಾಂಚನ ಆಗುತ್ತದೆ. ಕನ್ನಡಪರ ಹೋರಾಟಗಾರರನ್ನು ಅತಿ ಹೆಚ್ಚು ಕೊಟ್ಟಿರುವ ಜಿಲ್ಲೆ ಎಂದರೆ ಎಂದರೆ ಅದು ಚಾಮರಾಜನಗರ ಜಿಲ್ಲೆಯಾಗಿದೆ. ಯುವ ಕನ್ನಡಿಗರ ಸೇನೆಯು ದೊಡ್ಡ ಕನಸು ಇಟ್ಟುಕೊಂಡು, ದೂರದೃಷ್ಠಿಯಿಟ್ಟುಕೊಂಡು ಸ್ಥಾಪನೆ ಮಾಡಿರುವ ಸಂಘಟನೆ ಇದಾಗಿದೆ. ಯಾರಲ್ಲಿ ಕನ್ನಡ ಕಟ್ಟುವ ತಾಕತ್ತು ಇರುತ್ತದೆ. ಅಂತವರಿಗೆ ಟೀಕೆಗಳು ಬರುತ್ತದೆ. ರಾಘವೇಂದ್ರ ಅವರ ತಂಡವನ್ನು ಚಾಮರಾಜನಗರದಲ್ಲಿ ಮಾಡಲೇಬೇಕು ಎಂದು ರಾಜ್ಯದ ಪ್ರಮುಖರೊಂದಿಗೆ ಮಾತನಾಡಿ ಆಯ್ಕೆ ಮಾಡಿ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ಗ್ರಾಮದಿಂದಲ್ಲೂ ಶಾಖೆ ಆರಂಭಿಸಿ ಸಂಘಟನೆ ಕಟ್ಟಬೇಕು ಎಂದು ಸಲಹೆ ನೀಡಿದರು.
ಕೇವಲ 10 ತಿಂಗಳ ಹಿಂದೆ ಆರಂಭವಾದ ಯುವ ಕನ್ನಡಿಗರ ಸೇನೆಯು ಇಂದು ಇಡೀ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಮುಖೇನಾ, ಜನರನ್ನು ಖುದ್ದುಭೇಟಿ ಮಾಡಿ ಯಾವುದಾದರೂ ಸಂಘಟನೆ ಜನಮನ್ನಣೆ ಗಳಿಸಿದೆ ಎಂದರೆ ಅದು ಏಕೈಕ ಸಂಘಟನೆ ಎಂದರೆ ಅದು ನಮ್ಮ ಸಂಘಟನೆ ಮಾತ್ರ.ಸಂಘಟನೆ ಕಟ್ಟುವುದು ತುಂಬ ಸುಲಭ, ಆದರೆ ಅದನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಸಾವಿರಾರು ಸಂಘಟನೆಗಳು ಹುಟ್ಟುತ್ತಿವೆ. ಸಾಯುತ್ತಿವೆ. ಕೆಲವು ಮಾತ್ರ ಉಳಿದುಕೊಂಡಿವೆ’. ಕೆಲವು ಮಾತ್ರ ಮೈಸೂರು ರಸ್ತೆಗೆ ಸೀಮಿತವಾಗಿವೆ. ಆದರೆ ನಮ್ಮ ಸಂಘಟನೆ ಚಾಮರಾಜನಗರದಿಂದ ಹಿಡಿದು ಬೆಳಗಾಂವರೆಗೂ ಪ್ರತಿ ತಾಲೂಕು, ಹೋಬಳಿ, ಪ್ರತಿ ಗ್ರಾಮದಲ್ಲೂ ಶಾಖೆ ಇರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಎನ್.ಲೋಕೇಶ್ ಮಾತನಾಡಿ, ಕನ್ನಡಕ್ಕಾಗಿ ವರನಟ ಡಾ.ರಾಜ್‌ಕುಮಾರ್, ಕನ್ನಡ ಚಳವಳಿಗಾರ ವಾಟಾಳ್‌ನಾಗರಾಜ್ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಅದೇ ರೀತಿಯಲ್ಲಿ ಯುವ ಕನ್ನಡಿಗರ ಸೇನೆಯು ಕನ್ನಡಪರ ಹೋರಾಟ ಮಾಡಿ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಲಿ ಎಂದರು.
ಯುವ ಕನ್ನಡಿಗರ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಹಾಗೂ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಎಂ.ಜಗದೀಶ್ ಗೌಡ, ರಾಜ್ಯ ಮುಖ್ಯ ಸಲಹೆಗಾರ ಶೇ ಬೋ ರಾಧಕೃಷ್ಣ, ರಾಜ್ಯ ಸಲಹೆಗಾರ ಎಲ್.ನೀಲಕಂಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಡಿ.ಸಂದೀಪ್, ರಾಜ್ಯ ಸಂಚಾಲಕ ತೀರ್ಥೇಶ್, ರಾಜ್ಯ ಸಂಚಾಲಕರಾದ ಕರುಣೇಶ್, ಹೇಮಂತಾಚಾರಿ ರಾಜ್ಯ ಕಾನೂನು ಸಲಹೆಗಾರ ಎಂ.ಚರಣಗೌಡ, ರಾಜ್ಯ ಮಾಧ್ಯಮ ಸಲಹೆಗಾರ ನಾಗೇಶ್ ಆರಾಧ್ಯ, ಜಿಲ್ಲಾ ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಹೆಚ್.ನಾಗರಾಜು, ಸುರೇಶ್‌ಗೌಡ, ರಾಮಸಮುದ್ರ ಶಿವಣ್ಣ, ಸುರೇಶ್ ಹಾಗೂ ಯುವ ಕನ್ನಡಿಗರ ಸೇನೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.