ಕರ್ನಾಟಕ ಬಂದ್ ಬೆಂಬಲಿಸಿ ಕಲಾಪದಿಂದ ಹೊರಗುಳಿದ ಯಳಂದೂರು ವಕೀಲರು

ಯಳಂದೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಗುರುವಾರ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಯಳಂದೂರು ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸಭೆ ಸೇರಿದ ವಕೀಲರು, ರಾಜ್ಯದ ನೆಲ, ಜಲ, ನಾಡು, ನುಡಿಗೆ ಧಕ್ಕೆಯಾದಂತಹ ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮ ಸಂಘವು ಬೇಷರತ್ ಬೆಂಬಲ ವ್ಯಕ್ತಪಡಿಸುತ್ತ, ನಮ್ಮ ಪ್ರತಿಭಟನೆಯನ್ನೂ ದಾಖಲು ಮಾಡುತ್ತಾ ಬರುವ ಮೂಲಕ ಯಳಂದೂರು ವಕೀಲರ ಸಂಘವು ರಾಜ್ಯದ ಪರವಾದ ನಿಲುವನ್ನು ತಳೆಯುತ್ತಾ ಬಂದಿದೆ. ಹೀಗಾಗಿ ಇಂದಿನ ಕರ್ನಾಟಕ ಬಂದ್ ಗೂ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಕೋರ್ಟ್ ಕಲಾಪಗಳಿಂದ ಹೊರಗುಳಿಯೋಣ ಎಂದು ಒಮ್ಮತದ ತೀರ್ಮಾನವನ್ನು ತೆಗೆದುಕೊಂಡು ಬಳಿಕ ನ್ಯಾಯಾಲಯದ ಹೊರಗೆ ಜಮಾಯಿಸಿ ರಾಜ್ಯದ ಪರ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯಳಂದೂರು ವಕೀಲರ ಸಂಘದ ಅಧ್ಯಕ್ಷ ಜೈಶಂಕರ್, ಕಾರ್ಯದರ್ಶಿ ಜಿ.ಎನ್.ಸಂಪತ್, ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ಮಾಜಿ ಅಧ್ಯಕ್ಷರಾದ ಕೆ.ಬಿ.ಶಶಿಧರ್, ರಾಜಣ್ಣ, ಕೃಷ್ಣ, ವಕೀಲರಾದ ರವೀಶ್, ಎಂ.ನಾಗರಾಜು, ಸಿ.ಎಂ.ಮಹದೇವಸ್ವಾಮಿ, ಕೆ.ಕಾಂತರಾಜು, ಅಶ್ವಿನ್ ಕುಮಾರ್, ಆರ್.ಕುಮಾರಸ್ವಾಮಿ, ಆರ್.ಶ್ರೀನಿವಾಸಮೂರ್ತಿ, ಎಂ.ಕುಮಾರಸ್ವಾಮಿ, ಅನಂತ್, ಚಂದನಾ, ಉಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *