ಕೆಲವು ತಿಂಗಳುಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಚನದ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಶ್ರೀಗಳು ‘ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ನಾನು ದಾಸೋಹ ಮಾಡಿಕೊಂಡು, ಮಠ ನೋಡಿಕೊಂಡು, ಮಠದಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸ, ಅವರ ಯೋಗಕ್ಷೇಮ ನೋಡ್ಕೋಂತ ಇದ್ದು ಬಿಡ್ತೀನಿ. ಯಾವ ರಾಜಕೀಯದ, ಅವುಗಳ ಸಿದ್ಧಾಂತದ ಸೋಂಕೂ ನಮಗೆ ಬ್ಯಾಡ’ ಎಂದೆಲ್ಲ ಮಾತನಾಡಿದ್ದರು. ರಾಜಕಾರಣಿಗಳನ್ನು ಹುಡುಕಿಕೊಂಡು ಹೋಗುವ ಅಥವಾ ತಾವಿರುವಲ್ಲಿಗೇ ರಾಜಕಾರಣಿಗಳನ್ನು ಕರೆಸಿಕೊಂಡು ತಮಗೆ ಬೇಕಾದ್ದು, ಬೇಡದ್ದನ್ನೆಲ್ಲ ‘ಗುರುಕಾಣಿಕೆ’ ರೂಪದಲ್ಲಿ ಪಡೆಯುವ ಕಾವಿಧಾರಿಗಳ ಮಧ್ಯೆ ಈ ಸ್ವಾಮ್ಗಗಳು ಏನೋ ವಿಶೇಷ ಅನಿಸಿದ್ದು ನಿಜ.

ಅದೇ ರೀತಿ ನಿನ್ನೆಯಿಂದ ಮತ್ತೆ ಶ್ರೀಗಳು ಸುದ್ದಿಯಲ್ಲಿದ್ದಾರೆ. ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿರುವಾಗಲೇ ಸಚಿವ ಈಶ್ವರ್ ಖಂಡ್ರೆ ವೇದಿಕೆಗೆ ಆಗಮಿಸ್ತಾರೆ. ಆಗ ಅಲ್ಲಿ ನೆರೆದಿದ್ದ ಜನರು ಶ್ರೀಗಳ ಆಶೀರ್ವಚನವನ್ನೂ ಲೆಕ್ಕಿಸದೇ ಈಶ್ವರ್ ಖಂಡ್ರೆಗೆ ಜೈಕಾರ ಹಾಕ್ತಾ ಇರ್ತಾರೆ. ಅದನ್ನು ಗಮನಿಸಿದ ಶ್ರೀಗಳು ವೇದಿಕೆಯಿಂದ ಕೆಳಗಿಳಿದು ಹೊರಟುಬಿಡ್ತಾರೆ. ಸುದ್ದಿಮಾಧ್ಯಮಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಇದೇ ಸುದ್ದಿ. ಮೊದಲೇ ಹೇಳಿದಂತೆ ರಾಜಕಾರಣಿಗಳಿಗೆ ಆಶೀರ್ವದಿಸುತ್ತಾ ಅವರು ಕೊಡುವ ದೇಣಿಗೆ ಸಾಲದೆಂಬಂತೆ ಮತ್ತಷ್ಟು ಬೇಕು ಎನ್ನುವ ಸ್ವಾಮೀಜಿಗಳ ನಡುವೆ ಗವಿಸಿದ್ದೇಶ್ವರರು ಬಹಳ ಅಪರೂಪ ಮತ್ತು ನಿಜಶರಣರು ಎನ್ನಿಸಿದ್ದು ಈ ಕಾರಣಕ್ಕೆ.
ಮಠ, ಮಠಾಧೀಶರೆಂದರೆ ಮೂಗು ಮುರಿಯುವ ನಾನು, ಯೂಟ್ಯೂಬ್ ನಲ್ಲಿ ಶ್ರೀಗಳ ಹಲವು ಉಪನ್ಯಾಸಗಳನ್ನು ಆಲಿಸಿದ್ದ, ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳನ್ನು ಓದಿದ್ದರಿಂದ ಅವರ ವಿಚಾರಧಾರೆಗಳಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತನಾಗಿದ್ದರಿಂದ ಕೊಪ್ಪಳಕ್ಕೆ ಹೋಗುವ, ಶ್ರೀಮಠಕ್ಕೆ ಭೇಟಿ ನೀಡುವ, ಶ್ರೀಗಳನ್ನು ಕಂಡು ಮಾತನಾಡಿಸಿ ಬರುವ ಆಲೋಚನೆಯನ್ನು ಹೊಂದಿದ್ದೆನಾದರೂ ಕಾಲಾವಕಾಶ ಒದಗಿರಲಿಲ್ಲ. ಒಂದೆರಡು ತಿಂಗಳ ಹಿಂದೆ ಕೊಪ್ಪಳ ಮೂಲದ ನನ್ನ ಹಿರಿಯ ಮಿತ್ರರೊಬ್ಬರು ಪೊಲೀಸ್ ಠಾಣೆಯ ಕೆಲಸದ ನಿಮಿತ್ತ ನನ್ನನ್ನು ಅವರ ಜೊತೆಗೆ ಕೊಪ್ಪಳಕ್ಕೆ ಕರೆದುಕೊಂಡು ಹೋದರು. ಅಲ್ಲಿನ ಬೇವೂರು ಪೊಲೀಸ್ ಠಾಣೆಗೆ ತೆರಳಿ ದೂರೊಂದಕ್ಕೆ ಸಂಬಂಧಿಸಿದಂತೆ ನನ್ನ ಮಿತ್ರರ ಹೇಳಿಕೆಯನ್ನು ದಾಖಲಿಸಿ ಠಾಣೆಯಿಂದ ಹೊರಗೆ ಕಾಲಿಟ್ಟಾಗ ಮದ್ಯಾಹ್ನ 2 ಗಂಟೆಯಾಗಿತ್ತು. ಬೇವೂರಿನಿಂದ ಕೊಪ್ಪಳಕ್ಕೆ ಬಸ್ಸಿಡಿದು ತಲುಪಿ , ಕೆಎಸ್ಸಾರ್ಟಿಸಿ ಎದುರಿನ ಮಾಲತೇಶ ಖಾನವಳಿಯಲ್ಲಿ ಊಟ ಮುಗಿಸಿ, ಬಸ್ ನಿಲ್ದಾಣದಲ್ಲೇ ಅಂದು ರಾತ್ರಿ 9.30 ಕ್ಕೆ ಹೊಸಪೇಟೆಯಿಂದ ಮೈಸೂರಿಗೆ ಹೊರಡಲಿದ್ದ ಮಲಗಿ ಪ್ರಯಾಣಿಸುವ ಬಸ್ ನ ಟಿಕೆಟ್ ಮುಂಗಡ ಕಾಯ್ದಿರಿಸಿದೆವು. ಇಷ್ಟು ಕೆಲಸ ಮುಗಿಸುವ ಹೊತ್ತಿಗೆ ಮದ್ಯಾಹ್ನ 3 ಗಂಟೆಯಾಗಿತ್ತು.

ರಾತ್ರಿ 9.30 ರ ತನಕ ನಮಗೆ ಬೇರೇನೂ ಕೆಲಸವಿಲ್ಲದ್ದರಿಂದ ಗವಿಸಿದ್ದೇಶ್ವರರ ಮಠಕ್ಕೆ ಹೋಗೋಣ ನಡೆಯಿರಿ ಎಂದು ಜೊತೆಗಿದ್ದ ಸ್ನೇಹತರನ್ನು ಒತ್ತಾಯಿಸಿದೆ. ಅವರು ಆಟೋವೊಂದನ್ನು ಹಿಡಿದು ಶ್ರೀಮಠಕ್ಕೆ ಕರೆದುಕೊಂಡು ಹೋಗಿ, ಮಠ, ಅಲ್ಲಿನ ಗುಹೆಯೊಳಗಿನ ದೇವಸ್ಥಾನ, ಶ್ರೀಗಳಿಂದ ನಿರ್ಮಾಣಗೊಂಡ ಖಾಸಗಿ ವನ, ಸ್ವಚ್ಚಗೊಂಡಿರುವ ಕೊಳಗಳು, ಸುಮಾರು ಐದು ಸಾವಿರ ಮಕ್ಕಳು ಯಾವುದೇ ಜಾತಿಭೇದ, ಮತಗಳ ಹಂಗಿಲ್ಲದೇ ಕಲಿಯುತ್ತಿರುವ ವಿದ್ಯಾರ್ಥಿನಿಲಯ, ಅಲ್ಲಿನ ಶಾಲೆ, ಮಠದ ಆಯುರ್ವೇದ ಕಾಲೇಜು ಹೀಗೆ ಎಲ್ಲವನ್ನೂ ತೋರಿಸಿದರು. ಶ್ರೀಗಳು ಇದ್ದಾರ? ಅವರನ್ನು ಭೇಟಿ ಮಾಡಬಹುದೇ ಎಂದು ವಿಚಾರಿಸಿದೆ. ಆದರೆ ಅಂದು ಯಾವುದೋ ಪೂರ್ವನಿಯೋಜಿತ ಕಾರ್ಯಕ್ರಮವಿದ್ದಿದ್ದರಿಂದ ಸ್ವಾಮೀಜಿಗಳು ಅಲ್ಲಿಗೆ ತೆರಳಿದ್ದರಿಂದ ಗವಿಸಿದ್ದೇಶ್ವರರ ದರ್ಶನವಾಗಲಿಲ್ಲ.
ಆದರೆ ಶ್ರೀ ಮಠದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುವ ಆಯುರ್ವೇದ ವೈದ್ಯರೊಬ್ಬರು ನನ್ನ ಜೊತೆಗಿದ್ದ ಸ್ನೇಹಿತರಿಗೆ ಅತ್ಯಂತ ಆತ್ಮೀಯರು. ಅವರು ಜೊತೆಯಾದರು. ಕುತೂಹಲಕ್ಕಾಗಿ ಅವರ ಬಳಿ ಶ್ರೀ ಗಳ ಕುರಿತು ವಿಚಾರಿಸಿದಾಗ ಅವರು ಸ್ವಾಮೀಜಿಗಳ ಕುರಿತಾಗಿ ಹೇಳಿದ ಕೆಲವು ವಿಚಾರಗಳು ಶ್ರೀಗಳ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ಅವರು ಹೇಳಿದ್ದಿಷ್ಟು; “ನಮ್ಮ ಶ್ರೀಗಳು ತತ್ವಶಾಸ್ತ್ರ, ಸಂಸ್ಕೃತ, ಇಂಗ್ಲೀಷ್ ನಲ್ಲಿ ಪ್ರವೀಣರು. ಈ ವಿಷಯಗಳಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಹೊರಗೆ ಎಲ್ಲಿಯೂ ಹೋಗಿಲ್ಲವೆಂದರೆ ಬೆಳಿಗ್ಗೆ ಮತ್ತು ಸಂಜೆ ಮಕ್ಕಳಿಗೆ ಆಶೀರ್ವಚನ ನೀಡ್ತಾರೆ. ಶ್ರೀಗಳು ಅವರ ಪೂರ್ವಾಶ್ರಮದ ತಾಯಿಯವರನ್ನು ಭೇಟಿಯಾಗಿ ನಾಲ್ಕು ವರ್ಷಗಳಾಗಿತ್ತು. ಕೆಲವು ದಿನಗಳ ಹಿಂದೆ ಬೆನ್ನು ನೋವಿನ ಕಾರಣಕ್ಕೆ ಮಠದ ಆಯುರ್ವೇದ ಕಾಲೇಜು ಆಸ್ಪತ್ರೆಗೆ ದಾಖಲಾಗಿ ಒಂದು ವಾರ ಇಲ್ಲೇ ಇದ್ದು ಚಿಕಿತ್ಸೆ ಪಡೆದಿದ್ದರು. ಆದರೆ ಈ ಒಂದು ವಾರದ ಅವಧಿಯಲ್ಲಿ ಒಮ್ಮೆಯೂ ಶ್ರೀಗಳು ಅವರ ತಾಯಿಯವರನ್ನು ಭೇಟಿಯಾಗಲಿಲ್ಲ ಮತ್ತು ಆಸ್ಪತ್ರೆಯ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಸಾಮಾನ್ಯ ಜನರಿಗೆ ಹೇಗೆ ಮಠದ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆಯೋ ಹಾಗೆಯೇ ಅವರನ್ನೂ ನೋಡಿಕೊಳ್ಳಿ ಎಂದಷ್ಟೇ ಹೇಳಿದ್ದರು” ಎಂದಾಗ ಒಂದು ಕ್ಷಣ ಮೂಕವಿಸ್ಮಿತನಾದೆ. ಯಾಕಂದ್ರೆ ಮಠಗಳೂ ಸಹ ಇಂದು ಪಿತ್ರಾರ್ಜಿತ ಸ್ವತ್ತುಗಳಾಗುತ್ತಿದ್ದು, ಅವರ ಕುಟುಂಬದ ಕುಡಿಗಳೇ ಮುಂದಿನ ಪೀಠಾಧಿಪತಿಗಳಾಗುತ್ತಿರುವ ಈ ದಿನಗಳಲ್ಲಿ ತಮ್ಮ ತಾಯಿಯವರನ್ನೂ ಸಹ ಭೇಟಿಯಾಗದೇ ಆ ಮಟ್ಟಿಗೆ ಕೌಟುಂಬಿಕ ವ್ಯಾಮೋಹದಿಂದ ದೂರ ಉಳಿಯುವುದು ಸಾಧ್ಯವೇ ಎನಿಸಿತ್ತು.
ಇನ್ನು ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಕಲಿಯುತ್ತಿರುವ ಮಕ್ಕಳ ಬಗೆಗೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ. ಶ್ರೀಗಳು ಹಾಸ್ಟೆಲ್ ಗೆ ಭೇಟಿ ನೀಡಿದಾಗ ಎಲ್ಲಾ ಮಕ್ಕಳೂ ಅವರನ್ನು ಮಠಾಧೀಶರೆಂದು ಕಾಣುವುದಿಲ್ಲ ಬದಲಿಗೆ ತಮ್ಮ ತಂದೆ-ತಾಯಿಯನ್ನು ಕಾಣುತ್ತಾರೆ. ಒಮ್ಮೊಮ್ಮೆ ಎಲ್ಲಾ ಮಕ್ಕಳನ್ನೂ ಕೂರಿಸಿಕೊಂಡು ನಿಮಗೆ ವಿಶೇಷ ತಿನಿಸು ಏನು ಬೇಕೆಂದು ವಿಚಾರಿಸುತ್ತಾರಂತೆ. ಗೋಬಿ, ಪಾನಿಪುರಿ ಕೇಳಿದರೂ ಸಹ ಮಕ್ಕಳು ಆಸೆಪಡ್ತಿದಾರೆ ಮಾಡಿಕೊಡಿ ಎಂದು ಸೂಚಿಸುತ್ತಾರಂತೆ. ಒಮ್ಮೆ ಎಲ್ಲಾ ಮಕ್ಕಳೂ ಮಾವಿನ ಹಣ್ಣು ತಿನ್ನಬೇಕೆಂದು ಆಸೆಪಡುತ್ತಿರುವುದು ಶ್ರೀಗಳಿಗೆ ಗೊತ್ತಾಗಿ ಲೋಡುಗಟ್ಟಲೇ ಮಾವಿನ ಹಣ್ಣುಗಳನ್ನು ತರಿಸಿ ಮಕ್ಕಳು ಎಷ್ಟು ತಿನ್ನುತ್ತಾರೋ ಅಷ್ಟೂ ಕೊಡಿಸಿದರಂತೆ. ಇದು ಅವರನ್ನು ತೀರಾ ಹತ್ತಿರದಿಂದ ಪ್ರತಿನಿತ್ಯ ನೋಡುತ್ತಿರುವ ಅಲ್ಲಿನ ವೈದ್ಯರೊಬ್ಬರು ನೀಡಿದಂತಹ ಮಾಹಿತಿ.
ನಮ್ಮದು ಶರಣರ ನಾಡು. ಇಂತಹ ಪರಂಪರೆಯ ನಾಡಿನಲ್ಲಿ ಗವಿಸಿದ್ದೇಶ್ವರರಂತಹ ಶ್ರೀಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ. ಉತ್ತಮ ವಾಗ್ಮಿಗಳು, ಸುವಿಚಾರ ಸಂಪನ್ನರೂ ಆಗಿರುವ ಗವಿಸಿದ್ದೇಶ್ವರರ ನಿಸ್ಪೃಹ ತ್ರಿವಿಧ ದಾಸೋಹ ನಿರಾತಂಕವಾಗಿ ಹೀಗೆಯೇ ಮುಂದುವರಿಯಲಿ.
-ಗೌಡಹಳ್ಳಿ ಮಹೇಶ್
ವಕೀಲರು, ಚಾಮರಾಜನಗರ
