- ನಗರದಲ್ಲಿಂದು ನಮ್ಮ ಹರಿದರ್ಶನ ಪ್ರಕಾಶನ ಉದ್ಘಾಟನೆ, ಸಂಚಲನ ಕೃತಿ ಲೋಕಾರ್ಪಣೆ: ಡಾ.ವಿ.ಎನ್.ಮಹದೇವಯ್ಯ
ಚಾಮರಾಜನಗರ: ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರೂ ಆದ ಕವಿ ಸಿ. ಶಂಕರ ಅಂಕನಶೆಟ್ಟಿಪುರ ಅವರ ‘ಹರಿದರ್ಶನ’ ಪ್ರಕಾಶನ ಉದ್ಘಾಟನೆ ಮತ್ತು ‘ಸಂಚಲನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಮೇ 23 ರಂದು ನಡೆಯಲಿದೆ ಎಂದು ಡಾ. ಎಚ್. ಸಿ. ಮಹದೇವಪ್ಪ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಹೇಳಿದರು
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾನಿಧ್ಯವನ್ನು ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಅವರು ವಹಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆ ಹಾಗೂ ಕೃತಿ ಲೋಕಾರ್ಪಣೆಯನ್ನು ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಹಿಸುವವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ನಾರಾಯಣ ಪುಷ್ಷಾರ್ಚನೆ ಮಾಡಲಿದ್ದಾರೆ ಎಂದರು.
ಪ್ರಕಾಶನದ ಲಾಂಛನ ಬಿಡುಗಡೆಯನ್ನು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರಾದ ಶಿಲ್ಪನಾಗ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀರೂಪಾ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಸಾಹಿತಿ ಶಂಕನಪುರ ಮಹದೇವ, ಹಿರಿಯ ಹೋರಾಟಗಾರ ಪಿ. ಸಂಘಸೇನಾ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಸರ್ಕಾರಕ್ಕೆ ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಜಿಲ್ಲೆಯ ಶಾಸಕರು ಸಿ. ಶಂಕರ ಅಂಕನಶೆಟ್ಟಿಪುರ ಅವರನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿ ನೇಮಕ ಮಾಡಿದ್ದಾರೆ. ಅವರಿಗೆ ನಮ್ಮ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು. ಅಲ್ಲದೆ ಹೆಚ್.ಸಿ.ಮಹದೇವಪ್ಪ ಅವರು ಒಬ್ಬ ತಳ ಸಮುದಾಯದ ಶಂಕರ್ ಅವರನ್ನು ಗುರುತಿಸಿ ಆಯೋಗ ಸದಸ್ಯರಾಗಿ ಮಾಡುವ ಮೂಲಕ ಶೋಷಿತ ಸಮುದಾಯಗಳಿಗೆ ಒತ್ತು ನೀಡಿದ್ಧಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಹೋರಾಟಗಾರ ಪಿ. ಸಂಘಸೇನಾ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರೂ ಆದ ಕವಿ ಸಿ. ಶಂಕರ ಅಂಕನಶೆಟ್ಟಿಪುರ, ಕೆಪಿಸಿಸಿ ಮೀನುಗಾರರ ವಿಭಾಗದ ಜಂಟಿ ಕಾರ್ಯದರ್ಶಿ ಶಂಭುಲಿಂಗಸ್ವಾಮಿ, ರಾಮು, ರಾಜೇಂದ್ರ, ಮಲ್ಲೇಶ್ ಹಾಜರಿದ್ದರು