ಚಾಮರಾಜನಗರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ 3395 ಮತ್ತು ಸ್ಥಳೀಯ ವೃಂದದ 596 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇರ ನೇಮಕಾತಿ (ಸಿವಿಲ್)ಗಾಗಿ ಆಗಸ್ಟ್ 2 ರಂದು ಚಾಮರಾಜನಗರ ಪಟ್ಟಣದ 12 ಹಾಗೂ ಕೊಳ್ಳೇಗಾಲ ಪಟ್ಟಣದ 6 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯಲೆಂಬ ಸದುದ್ದೇಶದಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಲ 200 ಮೀ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಪಟ್ಟಣದ ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಸತ್ತಿ ರಸ್ತೆಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚನ್ನಿಪುರಮೋಳೆಯಲ್ಲಿರುವ ಸೇವಾಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆ ಶಿವಕುಮಾರಸ್ವಾಮಿ ಕಲ್ಯಾಣ ಮಂಟಪದ ಹಿಂಭಾಗ ಎಂಸಿಎಸ್ ಸಾರ್ವಜನಿಕ ಶಾಲೆ, ರೈಲ್ವೆ ನಿಲ್ದಾಣ ಹತ್ತಿರದ ಸೆಂಟ್ ಪೌಲ್ ಪ್ರೌಢಶಾಲೆ, ನಂಜನಗೂಡು ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸಿದ್ದಾರ್ಥ ನಗರದ ಸೆಂಟ್ ಜೋಸೆಫ್ ಪ್ರೌಢಶಾಲೆ, ಬಿಆರ್ ಹಿಲ್ಸ್ ರಸ್ತೆಯ ಜೆ.ಎಸ್.ಎಸ್. ಬಾಲಕರ ಪ್ರೌಢಶಾಲೆ, ಜೋಡಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಬಾಲಕಿಯರ ಪ್ರೌಢಶಾಲೆ, ಚನ್ನಿಪುರದ ಮೋಳೆಯಲ್ಲಿರುವ ಸೇವಾಭಾರತಿ ಹಿರಿಯ ಪ್ರಾಥಮಿಕ ಶಾಲೆ, ಸೋಮವಾರಪೇಟೆಯ ಶ್ರೀದೇವಿ ಟೆಕ್ಸ್‌ಟೈಲ್ಸ್ ಹತ್ತಿರದ ಯೂನಿವರ್ಸಲ್ ಇಂಗ್ಲಿ? ಶಾಲೆ ಪರೀಕ್ಷಾ ಕೇಂದ್ರಗಳಾಗಿವೆ.
ಕೊಳ್ಳೇಗಾಲ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಎಂಜಿಎಸ್‌ವಿ ಪದವಿ ಪೂರ್ವ ಕಾಲೇಜು, ಪಟ್ಟಣ ಪೊಲೀಸ್ ಠಾಣೆ ಎದುರಿನ ಎಸ್.ವಿ.ಕೆ.ವಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಆರ್.ಎಂ.ಸಿ ಮಾರುಕಟ್ಟೆ ಹಿಂಭಾಗ ಲಯನ್ಸ್ ಸಂಯೋಜಿತ ಪದವಿ ಪೂರ್ವ ಕಾಲೇಜು, ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು, ಎಂಎಂ ಹಿಲ್ಸ್ ರಸ್ತೆಯ ವಿದ್ಯಾನಗರದಲ್ಲಿರುವ ಜೆ.ಎಸ್.ಎಸ್. ಬಾಲಕಿಯರ ಪದವಿ ಪೂರ್ವ ಕಾಲೇಜು, ಬಿ.ಡಿ.ಓ ಕಚೇರಿ ಹತ್ತಿರದ ಶ್ರೀ ವಾಸವಿ ಸಂಯೋಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ ವ್ಯಾಪ್ತಿಯ ಪ್ರದೇಶವನ್ನು ಪರೀಕ್ಷಾ ದಿನದಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕ ನಿಷೇಧಿತ ಸ್ಥಳವೆಂದು ಘೋಷಿಸಿ ನಿಷೇಧಾಜ್ಞೆ ಹೊರಡಿಸಿದೆ. ಅಲ್ಲದೇ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮುಚ್ಚಲು ಸಹ ಆದೇಶಿಸಲಾಗಿದೆ.
ನಿಷೇದಾಜ್ಞೆ ಆದೇಶವು ಪರೀಕ್ಷೆ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮತ್ತು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Related