ಮೈಸೂರು: ನಗರದ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಲಾ ಆವರಣದಲ್ಲಿ 80ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿ0ದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತದ ಖ್ಯಾತ ವಿಜ್ಞಾನಿ ಹಾಗೂ ಜೀವ ತಂತ್ರಜ್ಞಾನ ಕ್ಷೇತ್ರದ ತಜ್ಞರಾದ ಡಾ. ಜಿ. ಎ. ರವಿಶಂಕರ್ (ಡಾ. ಗೋಕರೆ ಅಶ್ವಥನಾರಾಯಣ ರವಿಶಂಕರ್) ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ‍್ಯಕ್ಕಾಗಿ ಸುಮಾರು ಇನ್ನೂರು ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಹಾಗೂ ಬದುಕನ್ನು ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರ ತ್ಯಾಗವನ್ನು ನಾವು ಗೌರವಿಸಬೇಕು. ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು, ಎಂದು ಅವರು ಹೇಳಿದರು.
ವಿಜ್ಞಾನ ಸಂಶೋಧನೆಗಳು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗದೆ ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ. ವಿಜ್ಞಾನವು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರ ಜೊತೆಗೆ ಮೂಢನಂಬಿಕೆಗಳನ್ನು ದೂರ ಮಾಡುತ್ತದೆ ಮತ್ತು ದೈನಂದಿನ ಜೀವನದ ಸಮಸ್ಯೆಗಳಿಗೆ ಸರಳ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ ಎಂದರು.
ಮೈಸೂರು ನಗರವು ಸಂಶೋಧನೆ ಮತ್ತು ವಿಜ್ಞಾನದ ಪ್ರಮುಖ ಕೇಂದ್ರವಾಗಿದ್ದು, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಆರ್‌ಐಇ, ಬೆಮೆಲ್ ಹಾಗೂ ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳ ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಯು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ಸ್ವಾತಂತ್ರ‍್ಯದ ಮಹತ್ವವನ್ನು ವಿವರಿಸಿದ ಅವರು, ಸ್ವಾತಂತ್ರ‍್ಯವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ವತಂತ್ರ ಚಿಂತನೆ, ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ನೀಡಿದೆ. ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿವಿಧತೆಯಲ್ಲಿ ಏಕತೆ ನಮ್ಮ ರಾಷ್ಟ್ರದ ವಿಶೇಷತೆ. ಭಿನ್ನತೆಗಳನ್ನು ಮರೆತು ಪರಸ್ಪರ ಗೌರವದಿಂದ ಹಾಗೂ ಸಾಮರಸ್ಯದಿಂದ ಬದುಕುವುದು ದೇಶದ ಆಂತರಿಕ ಭದ್ರತೆ ಮತ್ತು ಅಭಿವೃದ್ಧಿಗೆ ಅತ್ಯಗತ್ಯ ಎಂದರು.
ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ನಿರಂತರವಾಗಿ ಮುನ್ನಡೆಯುತ್ತಿದ್ದು, ಸ್ವಾವಲಂಬನೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಬೆಳವಣಿಗೆಯು ಯುವಜನತೆಗೆ ಉಜ್ವಲ ಭವಿಷ್ಯದ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಸಂಸ್ಥೆಯ ಹಿತೈಷಿ ಶೈಲಜಾ ಮಾತನಾಡಿ, ಯುವಜನತೆ ಮತ್ತು ವಿದ್ಯಾರ್ಥಿಗಳೇ ದೇಶದ ನಿಜವಾದ ಆಸ್ತಿ. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಅವರು ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು, ಎಂದರು.
ಸಮರ್ಥನA ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ಸ್ವಾತಂತ್ರ‍್ಯ ಎಂಬುದು ಯಾರೋ ನೀಡಿದ ಭಿಕ್ಷೆಯಲ್ಲ; ಅದು ಲಕ್ಷಾಂತರ ಜನರ ಹೋರಾಟ ಮತ್ತು ಪ್ರಾಣ ಬಲಿದಾನದ ಫಲವಾಗಿದೆ. ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗಕ್ಕೆ ಗೌರವ ಸಲ್ಲಿಸುವುದಾದರೆ, ನಮ್ಮ ಜೀವನದಲ್ಲಿ ಇತರರ ಸ್ವಾತಂತ್ರ‍್ಯಕ್ಕೆ ಧಕ್ಕೆ ತರದೆ, ದಬ್ಬಾಳಿಕೆ ಮಾಡದೆ, ಪ್ರತಿಯೊಬ್ಬರನ್ನೂ ಗೌರವಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ಬದುಕಬೇಕು, ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕರಾದ ಮಂತೇಶ್, ಚೈತ್ರಕುಮಾರಿ, ಶಾಲೆಯ ಮುಖ್ಯೋಪಾಧ್ಯಾಯರಾದ ಬ್ರಹ್ಮರಂಭ, ವಿಶೇಷ ಶಿಕ್ಷಕರಾದ ಪದ್ಮ, ವಿದ್ಯಾವತಿ, ಬೃಂದಾಬಾಯಿ, ಸ್ಪರ್ಶ, ಅಭಿಲಾಷಾ, ತ್ರಿವೇಣಿ, ಮಹಾದೇವ, ಮಂಜುಳ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
