ಚಾಮರಾಜನಗರ: ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಪದ್ದತಿ ಕೂಡ ಸಹಕಾರಿಯಾಗಿದ್ದು ಇದರ ಅಳವಡಿಕೆಗೂ ಮಹತ್ವ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಲಹೆ ಮಾಡಿದರು.
ನಗರದ ಡಾ. ರಾಜ್‍ಕುಮಾರ್ ಜಿಲ್ಲಾ ಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ನಸಿರ್ಂಗ್ ಕಾಲೇಜು ಸಹಯೋಗದಲ್ಲಿ ಆರೋಗ್ಯಕರ ನಾಳೆಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾರಂಪಾರಿಕ ಆಯುರ್ವೇದ ಪದ್ದತಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಶುದ್ದ ನೀರು, ಗಾಳಿ, ಆಹಾರವಿಲ್ಲದಿದ್ದರೆ ಹಲವು ಕಾಯಿಲೆಗಳು ಬರಲಿವೆ. ಹೀಗಾಗಿ ಸ್ವಚ್ಛ ಪರಿಸರ, ಗಾಳಿ, ನೀರು ಹಾಗೂ ಆರೋಗ್ಯಕರ ಆಹಾರ ಸೇವಿಸುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಆಧುನಿಕ ಜೀವನ ಶೈಲಿಯಿಂದಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಿಂದೆ ಜನರು ಹೊಲ-ಗದ್ದೆಗಳಲ್ಲಿ ದೈಹಿಕವಾಗಿ ಶ್ರಮಿಸಿ, ನೆಮ್ಮದಿಯಾಗಿ ನಿದ್ರಿಸುತ್ತಿದ್ದರು. ಆದರೆ ಇಂದು ಬದಲಾಗಿರುವ ಜೀವನಶೈಲಿಯು ಸ್ಥೂಲಕಾಯ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯದ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಬೇಕು. ಕಾಯಿಲೆ ಬಂದ ನಂತರ ಗುಣಪಡಿಸುವುದಕ್ಕಿಂತ, ಕಾಯಿಲೆ ಬರುವುದನ್ನು ತಡೆಯುವುದು ಉತ್ತಮ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯ ಸಲಹೆಗಳನ್ನು ಪಾಲಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಆರೋಗ್ಯದಿಂದಿರಲು ಆಯುರ್ವೇದದ ಹಲವು ಅಂಶಗಳು ಪೂರಕವಾಗಿವೆ. ಆಯುರ್ವೇದ ಪದ್ಧತಿಯ ಮಹತ್ವವನ್ನು ಅರಿತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವೇದಾಂತಿ ಅವರು ಧನ್ವಂತರಿ ಜಯಂತಿ ಕೇವಲ ಹಿಂದಿನ ಕಾಲವನ್ನು ಸ್ಮರಿಸುವ ದಿನವಲ್ಲ. ಭಾರತೀಯ ವೈದ್ಯಕೀಯ ಪರಂಪರೆ ಹೇಗೆ ಆರಂಭವಾಯಿತು ಹಾಗೂ ಅದರ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳುವ ಮತ್ತು ವೈದ್ಯಕೀಯ ಕ್ಷೇತ್ರದವರು ತಮ್ಮ ಕರ್ತವ್ಯವನ್ನು ಪುನರ್‍ಪರಿಶೀಲಿಸಿಕೊಳ್ಳುವ ದಿನವಾಗಿದೆ ಎಂದರು.
2016ರಿಂದ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿಂದೆ ಹಿಂದೂ ಪಂಚಾಂಗದ ಆಧಾರದ ಮೇಲೆ ಧನ್ವಂತರಿ ಜಯಂತಿ ಅಕ್ಟೋಬರ್‍ನಿಂದ ನವೆಂಬರ್ ಅವಧಿಯಲ್ಲಿ ಬೇರೆ ಬೇರೆ ದಿನಗಳಲ್ಲಿ ಬರುತ್ತಿತ್ತು. ದೇಶಾದ್ಯಂತ ಒಂದೇ ದಿನ ಆಚರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ನಿಗದಿಪಡಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆಯುμï ಅಧಿಕಾರಿ ಡಾ. ಬಿ.ಪಿ. ಸÀತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ್, ಡಾ. ಗಿರೀಶ್, ಡಾ. ಪುನೀತ್ ಬಾಬು, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.