ಭಾರತ್ ಜೋಡೊ ಯುವ ಸಂಘ ಸ್ಥಾಪನೆ ಯೋಜನೆ : ಸದಸ್ಯತ್ವ ನೊಂದಣಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ ನೊಂದಣಿ ಸದಸ್ಯತ್ವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು

  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ(ಆ.01)ದಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸುವ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಯುವ ಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮರಸ್ಯ ಉತ್ತೇಜಿಸುವ ಸದುದ್ದೇಶವನ್ನು ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆ ಯೋಜನೆ ಹೊಂದಿದೆ. ಯೋಜನೆಯ ನೊಂದಣಿ ಕಾರ್ಯವನ್ನು ತೀವ್ರಗೊಳಿಸಲು ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯತ್ ಹಾಗೂ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಸಂಬಂಧಪಟ್ಟ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಸಕ್ರಿಯರಾಗುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

  ಯೋಜನೆ ಅನುಷ್ಠಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ನೊಂದಣಿ ಮಾಡಬೇಕಿದೆ. ನೊಂದಣಿ ಸಂಖ್ಯೆ ನಿಗದಿತಕ್ಕಿಂತ ಕಡಿಮೆ ಇರಬಾರದು, ಗರಿಷ್ಠತೆಗೆ ಮಿತಿ ಇಲ್ಲ. ಸಂಘದ ಸದಸ್ಯರನ್ನು ಆಧಾರ್ ದಾಖಲೆಯಡಿ ನೊಂದಾಯಿಸಬೇಕಿದ್ದು, ಆಧಾರ್ ಕಾರ್ಡ್ ವಿಳಾಸವಿರುವ ವ್ಯಾಪ್ತಿಯಲ್ಲಿಯೇ ನೊಂದಾಯಿಸಬೇಕು. ನೊಂದಣಿಯಾಗುವ ಎಲ್ಲಾ ಸದಸ್ಯರಿಗೂ ಗುರುತಿನ ಚೀಟಿ ನೀಡಲಾಗುವುದು ಎಂದರು.

  ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆಯ ಸದಸ್ಯತ್ವ ನೊಂದಣಿಗಾಗಿ ತೆರೆಯಲಾಗಿರುವ ಬಿ.ಜೆ.ವೈ.ಎಸ್ ಪೋರ್ಟಲ್ ಆಗಸ್ಟ್ 6ರಿಂದ ಆರಂಭವಾಗಲಿದೆ. ಚುನಾವಣಾ ತರಬೇತಿಗಾಗಿ ನೀಡಲಾಗುವ ಮಾಸ್ಟರ್ ಟ್ರೈನರ್ ಮಾದರಿಯಲ್ಲಿ ಯುವ ಸಂಘಗಳ ಸದಸ್ಯತ್ವ ನೊಂದಣಿ ಅನುಷ್ಠಾನಕ್ಕಾಗಿ ನಿಯೋಜಿಸಲಾಗಿರುವ ಅಧಿಕಾರಿಗಳಿಗೆ ಮಾಸ್ಟರ್ ಟ್ರೈನರ್‍ಗಳಿಂದ ತರಬೇತಿ ನೀಡಲಾಗುವುದು. ನಿಯೋಜಿತ ಅಧಿಕಾರಿಗಳು ತಮ್ಮ ವ್ಯಾಪ್ರಿಯಲ್ಲಿ ಸದಸ್ಯತ್ವ ನೊಂದಣಿಗಾಗಿ ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು. ತಾಲೂಕು ಆಡಳಿತಾಧಿಕಾರಿಗಳು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಯೋಜನೆಯ ಅನುಷ್ಠಾನದ ಮೇಲುಸ್ತುವಾರಿ ವಹಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

  ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆ ಮಹತ್ವದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲು ಸದಸ್ಯತ್ವ ನೊಂದಣಿಯ ಪ್ರಾಮುಖ್ಯತೆಯನ್ನು ಒಳಗೊಂಡಿರುವ ಸಂದೇಶ ಗೀತೆಯನ್ನು ಕೋರಿಯೋಗ್ರಾಫಿ ಮಾಡಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಲಾಂಚ್ ಮಾಡಲಾಗುವುದು. ಯೋಜನೆ ಅನುಷ್ಠಾನಕ್ಕಾಗಿ ಆಗಸ್ಟ್ 10ರೊಳಗೆ ಪ್ರತಿ ಪಂಚಾಯಿತಿಗೆ ತಲಾ ಒಬ್ಬರು ಮೆಂಟರ್ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಿದ್ದತಾ ಸಭೆಗಳನ್ನು ನಡೆಸಿ ಸದಸ್ಯತ್ವ ನೊಂದಣಿಗಾಗಿ ಅವಶ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು. 
  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಎಚ್.ಎಸ್. ಬಿಂದ್ಯಾ ಅವರು ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆ ಯೋಜನೆಯ ಅನುಷ್ಠಾನ ಹಾಗೂ ಸಂಘಗಳ ಸುಗಮ ಕಾರ್ಯನಿರ್ವಹಣೆಗಾಗಿ ಪಂಚಾಯಿತಿ ಮಟ್ಟದಲ್ಲಿ ಗೌರವಧನ ಆಧಾರದಲ್ಲಿ ಮೆಂಟರ್ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಯುವಕ ಸಂಘಗಳ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವುದು ಮೆಂಟರ್ ಕರ್ತವ್ಯವಾಗಿದೆ ಎಂದರು.

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್‍ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಎಲ್ಲಾ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *