ಚಾಮರಾಜನಗರ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಕೂಡ್ಲೂರು ಶ್ರೀಮಂಟೇಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಜಿಲ್ಲಾದ್ಯಂತ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ದೇವರಕೃಪೆಗೆ ಪಾತ್ರರಾದರು.
ದೇವಸ್ಥಾನದ ಆರ್ಚಕ ಸತ್ಯಪ್ಪ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷಪೂಜೆ ಹಮ್ಮಿಕೊಂಡು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಷಾಢಮಾಸದ ಅಮಾವಾಸ್ಯೆಯಾದ ಭೀಮನ ಅಮಾವಾಸ್ಯೆಯು ಮಹಿಳೆಯರಿಗೆ ವಿಶೇಷವಾದ ದಿನವಾಗಿದೆ. ಈ ದಿನ ವಿವಾಹಿತ ಮಹಿಳೆಯರು ಪತಿ ಪೂಜೆ ಮಾಡಿದರೆ, ಅವಿವಾಹಿತ ಮಹಿಳೆಯರು ಉತ್ತಮ ಪತಿಯನ್ನು ಪಡೆಯಲು, ಸಹೋದರ ಆಯಸ್ಸಿಗಾಗಿ ವ್ರತವನ್ನು ಮಾಡುತ್ತಾರೆ ಎಂದರು.
ಭೀಮನ ಅಮಾವಾಸ್ಯೆ ಶುಭಾಶಯಗಳು, ಉತ್ತಮ ಮಳೆ, ಬೆಳೆಯಾಗಲಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ ಎಂದು ಆಶಿಸಿದರು.
