ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಒಪ್ಪಲು ಸಾಧ್ಯವಿಲ್ಲ: ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಯು ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ಸ್ ನೀರು ನೀಡಲು ಹೇಳಿರುವುದನ್ನು ಕರ್ನಾಟಕ ಒಪ್ಪಲು ಸಾಧ್ಯವೇ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಸಹ ಇದೇ ಆದೇಶವನ್ನು ಎತ್ತಿಹಿಡಿದಿರುವುದು ರಾಜ್ಯದ ಪ್ರಸ್ತುತ ವಾಸ್ತವಿಕ ಪರಿಸ್ಥಿತಿಗೆ (ಮಳೆಯ ಕೊರತೆ) ವಿರುದ್ಧವಾಗಿದೆ. ಈಗ ನಮ್ಮಲ್ಲಿ ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾಗಿದೆ. ಈಗ ನಾಲ್ಕು ಸಾವಿರ ಕ್ಯೂಸೆಕ್ಸ್ ನೀರು ನೀಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿರುವ ನೀರಿನ ತೀವ್ರ ಕೊರತೆ, ಒಳಹರಿವಿನ ಇಳಿಕೆ ಮತ್ತು ರಾಜ್ಯದಲ್ಲಿ ಮಳೆಯಾಗದ ಬಗ್ಗೆ ಅಂಕಿ-ಅಂಶಗಳ ಸಮೇತ ಪ್ರಾಧಿಕಾರದ ಮುಂದೆ ಇಟ್ಟು 3 ಸಾವಿರ ಕ್ಯೂಸೆಕ್ಸ್‌ಗೆ ಇಳಿಸುವಂತೆ ಮನವಿ ಮಾಡಿದ್ದೆವು.

2,500 ಕ್ಯೂಸೆಕ್ಸ್ ನೀರು ಹರಿಯಲು ಆದೇಶದ ಅವಶ್ಯಕತೆ ಇಲ್ಲ, ಸ್ವಾಭಾವಿಕವಾಗಿ ಈ ನೀರು ಹರಿಯಲಿದೆ. ಸೂಪರ್ ಎಲ್ ನಿನೊ, ಬರಗಾಲದ ನಡುವೆ ನೀರು ಬಿಡಲು ಹೇಗೆ ಸಾಧ್ಯ. ಇದನ್ನು ನೆರೆಯ ತಮಿಳುನಾಡು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿಗಿಂತ ಹೆಚ್ಚಾಗಿ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪಟ್ಟಣಗಳು ಮತ್ತು ಹಳ್ಳಿಗಳ ಕುಡಿಯುವ ನೀರಿನ ಅಗತ್ಯವೇ ನಮ್ಮ ಮೊದಲ ಆದ್ಯತೆ. ನೀರು ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೇ ಹಾಹಾಕಾರ ಉಂಟಾಗುತ್ತದೆ ಎಂಬ ಸಂಕಷ್ಟವನ್ನು ಮತ್ತೊಮ್ಮೆ ನ್ಯಾಯಾಧಿಕರಣದ ಮುಂದಿಡುತ್ತೇವೆ. ರಾಜ್ಯದ ಕಾನೂನು ತಜ್ಞರ ತಂಡದೊಂದಿಗೆ (ಅಡ್ವೊಕೇಟ್ ಜನರಲ್ ಮುಂತಾದವರೊಂದಿಗೆ) ಚರ್ಚಿಸಿ, ರಾಜ್ಯದ ಹಿತರಕ್ಷಣೆಗೆ ಮುಂದಿನ ಕಾನೂನು ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕರ್ನಾಟಕದ ವಾದವೇನು?
ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ, 4,000 ಕ್ಯೂಸೆಕ್ ಬದಲು 3,000 ಕ್ಯೂಸೆಕ್‌ಗೆ ಇಳಿಸುವಂತೆ ಮನವಿ ಮಾಡಿದರು.

  • ಕರ್ನಾಟಕದ 4 ಜಲಾಶಯಗಳಲ್ಲಿ ಕೇವಲ 49.775 ಟಿಎಂಸಿ (ಶೇ.47.60) ನೀರು ಸಂಗ್ರಹವಿದ್ದು, ಕುಡಿಯುವ ನೀರಿಗೆ 29 ಟಿಎಂಸಿ, ಪರಿಸರ ಹರಿವಿಗೆ 10 ಟಿಎಂಸಿ ಮತ್ತು ಮುಂಗಾರು ಬೆಳೆಗೆ 23.40 ಟಿಎಂಸಿ ಅಗತ್ಯವಿದೆ.
  • ಜೂನ್ 1ರಿಂದ ಸೆ.22ರವರೆಗೆ ಕರ್ನಾಟಕದಲ್ಲಿ ಕೇವಲ 406.5 ಮಿ.ಮೀ ಮಳೆಯಾಗಿದೆ (ಸಾಮಾನ್ಯ 643.4 ಮಿ.ಮೀ.ನ ಶೇ.63.18 ಮಾತ್ರ). ಜಲಾಶಯಗಳಿಗೆ ಒಳಹರಿವು ಕೇವಲ 2,200 ಕ್ಯೂಸೆಕ್‌ಗೆ ಕುಸಿದಿದೆ.
  • ನೈಋತ್ಯ ಮುಂಗಾರು ಬಹುತೇಕ ಮುಕ್ತಾಯವಾಗಿದ್ದು, ಮುಂದೆ ಒಳಹರಿವಿನ ನಿರೀಕ್ಷೆಯೇ ಇಲ್ಲ.
  • ಕಾವೇರಿ ಜಲಾನಯನ ಪ್ರದೇಶದ ಶೇ.71ರಷ್ಟು ತಾಲೂಕುಗಳು (ಶೇ.75ರಷ್ಟು ಭೌಗೋಳಿಕ ಪ್ರದೇಶ) ಬರಪೀಡಿತ ಎಂದು ಘೋಷಿಸಲಾಗಿದೆ.
  • ಜುಲೈ 29ರಿಂದ ಸೆ.23ರವರೆಗೆ CWMA ಆದೇಶದ 4,21,500 ಕ್ಯೂಸೆಕ್ ಬದಲು 4,47,182 ಕ್ಯೂಸೆಕ್ (38.637 ಟಿಎಂಸಿ) ನೀರನ್ನು ಬಿಳಿಗುಂಡ್ಲುವಿನಲ್ಲಿ ಹರಿಸಲಾಗಿದ್ದು, ಈಗಾಗಲೇ 25,682 ಕ್ಯೂಸೆಕ್ (2.219 ಟಿಎಂಸಿ) ಹೆಚ್ಚುವರಿ ನೀರು ಬಿಡಲಾಗಿದೆ.
  • ಸೂಪರ್ ಎಲ್ ನಿನೊ ಪರಿಣಾಮದಿಂದ ಮುಂಗಾರು ವಿಫಲವಾಗಿದ್ದು, ತಮಿಳುನಾಡಿನಲ್ಲೇ ತಜ್ಞರ ಸಮಿತಿ ಈಶಾನ್ಯ ಮುಂಗಾರಿನಲ್ಲಿ ಅತಿವೃಷ್ಟಿ, ಪ್ರವಾಹದ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ 52.177 ಟಿಎಂಸಿ ಸಂಗ್ರಹವಿದ್ದು, ಕರ್ನಾಟಕದಿಂದ ನೀರು ಬಿಡದಿದ್ದರೂ ಅವರು ಸುಸ್ಥಿತಿಯಲ್ಲಿದ್ದಾರೆ.

ಈ ಎಲ್ಲ ಅಂಶಗಳು, ನ್ಯಾಯ ಮತ್ತು ಸಮಾನತೆಯ ತತ್ವ ಹಾಗೂ ಬಿಳಿಗುಂಡ್ಲು ಕೆಳಭಾಗದ ಜಲಾನಯನ ಪ್ರದೇಶದಿಂದ ಈಶಾನ್ಯ ಮುಂಗಾರಿನಲ್ಲಿ ಹರಿದುಬರುವ ನೀರನ್ನು ಪರಿಗಣಿಸಿ ಹರಿವನ್ನು 3,000 ಕ್ಯೂಸೆಕ್‌ಗೆ ಇಳಿಸುವಂತೆ ಕರ್ನಾಟಕ ಕೋರಿತ್ತು.

Leave a Reply

Your email address will not be published. Required fields are marked *