ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಬುಧವಾರ ಚಾಮರಾಜನಗರ ಪಟ್ಟಣದಲ್ಲಿರುವ ಸ್ಪಂದನ ವ್ಯಸನ ಮುಕ್ತ ( ಡಿ-ಅಡಿಕ್ಷನ್) ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಿದರು.
ಕೇಂದ್ರದಲ್ಲಿದ್ದ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಯವರು ಮದ್ಯಪಾನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಸಲಹೆ ನೀಡಿದರು.
ಚಿಕಿತ್ಸೆ ಪೂರ್ಣಗೊಂಡ ಬಳಿಕ ತಮ್ಮ ಗ್ರಾಮಗಳಲ್ಲಿ ಇತರರಿಗೂ ಮದ್ಯವ್ಯಸನ ತ್ಯಜಿಸಲು ಪ್ರೇರಣೆ ನೀಡುವಂತೆ ಕರೆ ನೀಡಿದರು.
ಪ್ರಸ್ತುತ ಕೇಂದ್ರದಲ್ಲಿ 12 ಮಂದಿ ವ್ಯಸನಮುಕ್ತಿಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರದ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸಾ ಹಾಗೂ ಪುನರ್ವಸತಿ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಯವರು ಮಾಹಿತಿ ಪಡೆದುಕೊಂಡರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಪಿ.ಚಂದ್ರಶೇಖರ್, ಆರೋಗ್ಯ ಸಿಬ್ಬಂದಿ ಭಾಗ್ಯ ಇತರರು ಇದ್ದರು.