ಹನೂರಿನ ವಿವಿಧ ಗ್ರಾಮಗಳಿಗೆ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ: ಬರ ಪರಿಶೀಲನೆ

ಚಾಮರಾಜನಗರ: ಜಿಲ್ಲೆಯಲ್ಲಿ ಬರ ವೀಕ್ಷಣೆ ಕಾರ್ಯವನ್ನು ಮುಂದುವರೆಸಿರುವ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಹನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಶಾಸಕರಾದ ಎಂ.ಆರ್.ಮಂಜುನಾಥ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಹನೂರು ತಾಲೂಕಿನ ಹುತ್ತೂರು, ಪಿಜಿ ಪಾಳ್ಯ, ಜೋರೆದೊಡ್ಡಿ, ಊಯಿಲನತ್ತ, ಅಜ್ಜಿಪುರ, ದಾಸನದೊಡ್ಡಿ, ದೊಮ್ಮನಗದ್ದೆ, ಎಲ್ಲೇಮಾಳ, ಉಪ್ಪಾರದೊಡ್ಡಿ, ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. 

ಬೆಳಿಗ್ಗಿನಿಂದಲೇ ಅಭಾವ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿದರು. 

ಗ್ರಾಮಗಳಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದ ಬೆಳ್ಳುಳ್ಳಿ, ಜೋಳ, ಅರಿಶಿಣ, ಆಲೂಗಡ್ಡೆ, ಇನ್ನಿತರ ಬೆಳೆಗಳನ್ನು ವೀಕ್ಷಿಸಿದರು.

ಪಿಜಿ ಪಾಳ್ಯ ಗ್ರಾಮದಲ್ಲಿ ರೈತ ಮುಖಂಡರು ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸಗೊಬ್ಬರದ ಸಮಸ್ಯೆ ಇದೆ. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ತೋಟಗಾರಿಕೆ ಸೌಲಭ್ಯಗಳು ಲಭಿಸಬೇಕು ಎಂದು ಮನವಿ ಮಾಡಿದರು.
ಹುತ್ತೂರು ಗ್ರಾಮಕ್ಕೇ ಭೇಟಿ ನೀಡಿದ ವೇಳೆ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ ಅರಿಶಿಣ, ಆಲೂಗಡ್ಡೆ, ಬೆಳ್ಳುಳ್ಳಿ ಬೆಳೆ ಮಳೆಯಿಲ್ಲದೆ ಹಾನಿಯಾಗಿದೆ. ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಕೋರಿದರು. ಇದೇ ವೇಳೆ ಸಚಿವರು ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿ ಬೆಳೆಗಳಿಗೆ ವಿಮೆ ಮಾಡಿಸಿಲ್ಲವೇ? ರೈತರಿಗೆ ಬೆಳೆ ವಿಮೆಯಂತಹ ಬಹುಮುಖ್ಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಸರ್ಕಾರಿದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಗ್ರಾಮಗಳಿಗೆ ಸಚಿವರು ಭೇಟಿ ನೀಡಿದ ವೇಳೆ ಗ್ರಾಮಸ್ಥರು ಕುಡಿಯುವ ನೀರಿಗೆ ಅಭಾವ ಉಂಟಾಗಿದೆ. ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಟ್ಯಾಂಕರ್ ಗಳ ಮೂಲಕ ಸಮರ್ಪಕವಾಗಿ ನೀರು ಒದಗಿಸಬೇಕು. ಜಾನುವಾರುಗಳಿಗೂ ನೀರಿನ ಕೊರತೆ ಉಂಟಾಗಿದೆ. ಮೇವಿನ ವಿತರಣೆಯು ಆಗಬೇಕು ಎಂದು ಮನವಿ ಮಾಡಿದರು. ಜೊತೆಗೆ ಚರಂಡಿಗಳ ಸ್ವಚ್ಚತೆ, ಬೀದಿ ದೀಪ, ರಸ್ತೆ ದುರಸ್ತಿಯಂತಹ ಮೂಲ ಸೌಲಭ್ಯಗಳ ಕೊರತೆಯೂ ಸಹ ಕಾಡುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮಗಳನ್ನು ವಹಿಸಲಾಗುವುದು ಎಂದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.

ಜೋರೆದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರು ಅಂಗನವಾಡಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು. ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಹೆಚ್ಚಾಗಿದೆ. ಇಲ್ಲಿರುವ ಸಮುದಾಯ ಭವನ ಶಿಥಿಲವಾಗಿದ್ದು ಹೊಸದಾಗಿ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಹಾಗೂ ಶಾಸಕರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಮಾಜಿ ಶಾಸಕರಾದ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ತಹಶೀಲ್ದಾರ್ ಚೈತ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಉಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಗ್ರಾಮಗಳ ಭೇಟಿಯ ಬಳಿಕ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಶಾಸಕರಾದ ಎಂ.ಆರ್.ಮಂಜುನಾಥ್ ಅವರೊಂದಿಗೆ ಅಧಿಕಾರಿಗಳ ಸಭೆ ನಡೆಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ತುರ್ತಾಗಿ ನೆರವಾಗಲು ವಹಿಸಬೇಕಿರುವ ಕ್ರಮಗಳಿಗೆ ಮುಂದಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶ್ರೀ ರೂಪ,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಕಧಿಕಾರಿ ಮೋನಾರೋತ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *