ಬೃಹತ್ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ಮೈಸೂರು: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸುವರ್ಣ ಬೆಳಕು ಫೌಂಡೇಶನ್ (ರಿ.), ಮೈಸೂರು, ಪಾಂಚಜನ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಗುರು ವಿನಾಯಕ ಸ್ನೇಹ ಬಳಗ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ, ಎಎಸ್‌ಜಿ ಕಣ್ಣಿನ ಆಸ್ಪತ್ರೆ, ಮೈಸೂರು ಮತ್ತು ಸುಯೋಗ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ರಾಮಕೃಷ್ಣನಗರ, ಮೈಸೂರು ಸಹಯೋಗದೊಂದಿಗೆ ನಗರದ 3ನೇ ಮೇನ್, ಸಮುದಾಯ ಭವನ, ಮೇದರ್ ಬ್ಲಾಕ್, ಬಂಬೂ ಬಜಾರ್ನಲ್ಲಿ ಗುರುವಾರ ಬೃಹತ್ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಇದೇ ಸಂದರ್ಭದಲ್ಲಿ ಗುರು ವಿನಾಯಕ ಸ್ನೇಹ ಬಳಗದ ಸಂಸ್ಥಾಪಕ ಗುರು ವಿನಾಯಕ ಅವರ ಜನ್ಮದಿನವನ್ನು ಸಮಾಜಮುಖಿ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಗರ ಪ್ರದೇಶದ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಆರಂಭಿಕ ಹಂತದಲ್ಲೇ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವುದರಿಂದ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹುಟ್ಟುಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಆರೋಗ್ಯ ಸೇವೆಯಂತಹ ಕಾರ್ಯಕ್ರಮಗಳ ಮೂಲಕ ಆಚರಿಸುವುದು ಉತ್ತಮ ಬೆಳವಣಿಗೆಯಾಗಿದ್ದು, ಇಂತಹ ಸೇವಾ ಕಾರ್ಯಗಳು ಇತರರಿಗೂ ಮಾದರಿಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಎಸ್. ಮಹೇಶ್, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಒತ್ತಡದ ಜೀವನಶೈಲಿಯಿಂದ ತಮ್ಮ ಆರೋಗ್ಯದ ಬಗ್ಗೆ ಸಮರ್ಪಕ ಕಾಳಜಿ ವಹಿಸುತ್ತಿಲ್ಲ. ಅನಿಯಮಿತ ಆಹಾರ ಪದ್ಧತಿ ಹಾಗೂ ಆರೋಗ್ಯ ತಪಾಸಣೆಯನ್ನು ನಿರ್ಲಕ್ಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲಾ ವಯೋಮಾನದ ಜನರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. “ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ” ಎಂದು ಹೇಳಿದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಅಲ್ಲದೆ ಪರಿಣಿತ ವೈದ್ಯರು ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

ಕಣ್ಣಿನ ತಪಾಸಣಾ ವಿಭಾಗದಲ್ಲಿ ಕಂಪ್ಯೂಟರೀಕೃತ ಆಟೋ ರಿಫ್ರಾಕ್ಟೋಮೀಟರ್ (AR) ಮೂಲಕ ಕಣ್ಣಿನ ಪರೀಕ್ಷೆ, ದೂರದೃಷ್ಟಿ ಹಾಗೂ ಸಮೀಪದೃಷ್ಟಿ ಪರೀಕ್ಷೆ, ಅನುಭವಿ ನೇತ್ರ ತಜ್ಞರಿಂದ ತಪಾಸಣೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಯಶಸ್ವಿನಿ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯ ಸೌಲಭ್ಯದ ಮಾಹಿತಿಯನ್ನೂ ನೀಡಲಾಯಿತು. ಶಿಬಿರಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಯಶಸ್ವಿನಿ ಕಾರ್ಡ್, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅಗತ್ಯವಿರುವ ಬಗ್ಗೆ ಆಯೋಜಕರು ಮಾಹಿತಿ ನೀಡಿದರು.

ಶಿಬಿರದಲ್ಲಿ ಸಾರ್ವಜನಿಕರು ಹಾಗೂ 18ನೇ ವಾರ್ಡ್‌ನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ನಗರ ಎಸ್‌ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ನಾಗೇಶ್ ನಾಯಕ, ಮಾಜಿ ಪಾಲಿಕೆ ಸದಸ್ಯರಾದ ಎಂ. ಚಿಕ್ಕವೆಂಕಟು, ಬೋ. ಉಮೇಶ್, ಬಿ.ವಿ. ರವೀಂದ್ರ, ನಗರ ಕಾರ್ಯದರ್ಶಿ ಎಂ.ಎಸ್. ಪುನೀತ್, ಮರಿಸ್ವಾಮಿನಾಯಕ, ಯಾದವಗಿರಿ ವಾರ್ಡ್ ಬಿಜೆಪಿ ಅಧ್ಯಕ್ಷ ಕಿರಣ್ ಬೋಲಾರೆ, ನಿವೃತ್ತ ಇಂಜಿನಿಯರ್ ಷಣ್ಮುಗಂ, ಮುರುಗೇಶ್, ಜೀವನ್ ಪ್ರಕಾಶ್, ಮಂಜುನಾಥಪುರಂ ಅನಿಲ್, ಸುನೀಲ್, ಗೋಕುಲಂ ಜಯಣ್ಣ, ಕೇಬಲ್ ವಿಜಿ, ನಂದೀಶ್, ಲೋಕೇಶ್, ಮನೀಷ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *