ಚಾಮರಾಜನಗರ: ತಾಲೂಕಿನ ಅರಕಲವಾಡಿ ಗ್ರಾಮದ ಎನ್. ರಾಚಯ್ಯ ಬಡಾವಣೆಯಲ್ಲಿ ಶ್ರೀರಾಮಲಿಂಗೇಶ್ವರ ಹಾಗೂ ಮಂಟೇಸ್ವಾಮಿ ದೇವಸ್ಥಾನಗಳ ನೂತನ ನಿರ್ಮಾಣ ಕಾಮಗಾರಿಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು, ದೇವಸ್ಥಾನಗಳ ನಿರ್ಮಾಣಕ್ಕಾಗಿ 18 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ಒಂದು ವರ್ಷದ ಅವಧಿಯೊಳಗೆ ಅಚ್ಚುಕಟ್ಟಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದಡಿ ಪ್ರತಿಯೊಬ್ಬರಿಗೂ ವಸತಿ, ಕುಡಿಯುವ ನೀರು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಪ್ರತಿಯೊಂದು ಸಮುದಾಯದ ಬೀದಿಗಳಿಗೂ ಉತ್ತಮ ರಸ್ತೆ, ಚರಂಡಿ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗುತ್ತಿದ್ದು, ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಂಭಾಪ್ಪ, ಗ್ರಾಮದ ಮುಖಂಡರಾದ ಜವರಯ್ಯ, ಪ್ರಭುಸ್ವಾಮಿ, ಮಹದೇವಯ್ಯ, ಚಿಕ್ಕಬಸವಯ್ಯ, ಮರಿಸ್ವಾಮಿ, ಗುರುಸಿದ್ದಯ್ಯ, ಬಸವಯ್ಯ, ಕರಿಯಯ್ಯ, ಜಯಶೀಲಾ, ಸಣ್ಣಯ್ಯ, ಗುತ್ತಿಗೆದಾರ ನಾಗರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
