ಚಾಮರಾಜನಗರ: 2025ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗಿ ಅನುತ್ತೀರ್ಣಗೊಂಡ ಹಾಗೂ ಪರೀಕ್ಷೆ-1ರಲ್ಲಿ ತೇರ್ಗಡೆಗೊಂಡು ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಮೇ 10 ಕಡೆಯ ದಿನವಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
2025ರ ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಮೇ 10 ಅಂತಿಮ ದಿನವಾಗಿದೆ. ಅನುತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ನಿಗಧಿತ ಕಾಲಮಿತಿಯೊಳಗೆ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಆದ್ಯ ಗಮನ ನೀಡಬೇಕು.
ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣಗೊಂಡ ಶಾಲಾ ಅಭ್ಯರ್ಥಿಗಳು ಪರೀಕ್ಷೆ-2ಕ್ಕೆ ನೋಂದಣಿಯಾಗಲು ಶುಲ್ಕ ವಿನಾಯಿತಿ ಇರುತ್ತದೆ. ಪರೀಕ್ಷೆ-1ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸಿದ್ದಲ್ಲಿ ಪರೀಕ್ಷೆ-2ಕ್ಕೆ ನಿಗದಿತ ಶುಲ್ಕ ಪಾವತಿ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಪರೀಕ್ಷೆ-2ಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆ-2ಕ್ಕೆ ಹಾಜರಾಗುತ್ತಿರುವ ಅನುತ್ತೀರ್ಣ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ವಿಶೇಷ ತರಗತಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಶಾಲೆಯಿಂದ ದೂರವಿರುವ ಗ್ರಾಮಗಳ ವಿದ್ಯಾರ್ಥಿಗಳು ಸಮೀಪದ ವಸತಿ ನಿಲಯಗಳಲ್ಲಿ ವಾಸ್ತವ್ಯ ಮಾಡಲು ಊಟ ಮತ್ತು ವಸತಿಗೆ ಅಗತ್ಯ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆ-2ರ ಪರೀಕ್ಷೆಗಳು ಮೇ 26 ರಿಂದ ಜೂನ್ 2 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related