ಚಾಮರಾಜನಗರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು ಆಗಿರುವ ಆರ್. ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಪಂಚಾಯತ್ ಲಿಂಕ್ ಡಾಕುಮೆಂಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಉಸ್ತುವಾರಿಗಾಗಿ ನೇಮಕವಾಗಿರುವ ನೋಡಲ್ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಕುಡಿಯುವ ನೀರಿನ ಬವಣೆ ನೀಗಿಸಲು ಅಗತ್ಯವಿರುವ ಎಲ್ಲ ಕ್ರಮಗಳಿಗೆ ಮುಂದಾಗಬೇಕು. ಅಗತ್ಯವಿರುವೆಡೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುವ ವೆಚ್ಚ ವಿವರ ದಾಖಲಿಸಲು ಪಾರದರ್ಶಕ ಕ್ರಮ ಅನುಸರಿಸಬೇಕು. ಸಮರ್ಪಕ ನೀರು ಪೂರೈಕೆ ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿ ಮಾಡಬೇಕು. ನೋಡೆಲ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಟಿ. ನರಸೀಪುರದಿಂದ ಪೂರೈಕೆಯಾಗುತ್ತಿರುವ ಮಾರ್ಗಮಧ್ಯೆ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಅಡಿ ತ್ವರಿತವಾಗಿ ನೀರು ಒದಗಿಸುವ ಕಾರ್ಯ ಶೀಘ್ರ ಅನುಷ್ಠಾನವಾಗಬೇಕು. ಇದರಿಂದ ಚಾಮರಾಜನಗರ ಪಟ್ಟಣಕ್ಕೆ ನೀರು ಸಮರ್ಪಕವಾಗಿ ಸರಬರಾಜು ಆಗಲು ಸಾಧ್ಯವಾಗಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದಿದ್ದರೆ ಟ್ಯಾಂಕರ್‍ಗಳ ಮೂಲಕ ಪೂರೈಸುವ ನೀರಿನ ವೆಚ್ಚ ಭರಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯಾಗಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಅನುತ್ತೀರ್ಣತೆ ಇರಬಾರದು. ಫಲಿತಾಂಶದಲ್ಲಿ ಹೆಚ್ಚಳ ಕಾಣಬೇಕು. ಶೇ. 100ರಷ್ಟು ಫಲಿತಾಂಶಕ್ಕಾಗಿ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಗುರುತಿಸಿ ಕೇಂದ್ರಿಕರಿಸಿ ಹೊಸಹೊಸ ಕಲಿಕಾ ವಿಧಾನಗಳು, ಕಾರ್ಯಾಗಾರಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ಮಕ್ಕಳ ಪ್ರತಿನಿತ್ಯದ ಹಾಜರಾತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಮನೆಗೋಡೆಗಳು ಕುಸಿಯದಂತೆ ಮನೆಯ ಸ್ಥಿತಿಗತಿಗಳನ್ನು ಗಮನಿಸಬೇಕು. ಮಳೆನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಪಂಚಾಯಿತಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ಕಟ್ಟಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆ ಉದ್ಭವಿಸಿದರೆ ಸಂಬಂಧಪಟ್ಟ ತಹಸೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಎಚ್ಚರಿಕೆ ನೀಡಿದರು.
ಜಿಲ್ಲೆಯ ಮೆಟ್ರಿಕ್ ಪೂರ್ವ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು. ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟಲ್‍ಗಳಲ್ಲಿ ಮಕ್ಕಳ ಗೈರುಹಾಜರಿ ಗಮನಿಸಲಾಗಿದೆ. ಇದರ ಪರಿಹಾರಕ್ಕಾಗಿ ಅಧಿಕಾರಿಗಳು ಕ್ಷೇತ್ರಪ್ರವಾಸ ಕೈಗೊಳ್ಳಬೇಕು. ಮಕ್ಕಳ ಪೋಷಕರಿಗೆ ತಿಳಿವಳಿಕೆ ನೀಡಬೇಕು ಎಂದರು.
ಜಿಲ್ಲಾಮಟ್ಟದ ಅಧಿಕಾರಿಗಳು 2026-27ನೇ ಸಾಲಿನ ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ದಪಡಿಸಿ ಶೀಘ್ರವಾಗಿ ಸಲ್ಲಿಸಬೇಕು. ಯಾವುದೇ ವಿಳಂಬಕ್ಕೆ, ತಿದ್ದುಪಡಿಗೆ ಅವಕಾಶವಾಗದಂತೆ ಕ್ರಿಯಾಯೋಜನೆ ಪರಿಶೀಲಿಸಿ ಸಿದ್ದಪಡಿಸಬೇಕು. ಏನಾದರೂ ಬದಲಾವಣೆ ಇದ್ದಲ್ಲಿ ಸರಿಪಡಿಸಿ ಜೂನ್ ಮಾಹೆಯ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್. ವಿನೋತ್ ಪ್ರಿಯಾ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.