ಚಾಮರಾಜನಗರ: ಚಾಮರಾಜನಗರ ಜಿಲ್ಲೆಯು ಬರಪೀಡಿತವೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರೈತರ ವಿರುದ್ದ ಕಠಿಣ ಸಾಲ ವಸೂಲಾತಿ ಕ್ರಮಗಳನ್ನು ಕೈಗೊಳ್ಳದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಬ್ಯಾಂಕ್ ಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಸೆ.23) ಬರ ಪೀಡಿತ ಪ್ರದೇಶದ ರೈತರಿಗೆ ಬ್ಯಾಂಕ್ ಗಳ ಮೂಲಕ ಪರಿಹಾರ ಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಂಬಂಧ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅರ್ಹ ಬೆಳೆ ಸಾಲಗಳು ಹಾಗೂ ಕೃಷಿ ಆಧಾರಿತ ಸಾಲಗಳ ಮರುಪಾವತಿಯನ್ನು 12 ತಿಂಗಳ ಕಾಲ ತಾತ್ಕಾಲಿಕವಾಗಿ ಮುಂದೂಡಲಾಗಿದೆ (ಮೊರಟೋರಿಯಂ-ಇದು ಸ್ಟ್ಯಾಂಡರ್ಡ್ ಸಾಲಗಳಿಗೆ ಅನ್ವಯ) ಒಟ್ಟು ಮರುಪಾವತಿ ಅವಧಿಯನ್ನು 60 ತಿಂಗಳವರೆಗೆ ವಿಸ್ತರಿಸಲಾಗಿದ್ದು, ಈ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಬರಪೀಡಿತ ಪ್ರದೇಶದ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡುವಂತಿಲ್ಲ ಎಂದು ಬ್ಯಾಂಕ್‍ಗಳಿಗೆ ಸೂಚಿಸಿದರು.
ದಿನಾಂಕ 27-08-2026ರ ವೇಳೆಗೆ ಸ್ಟ್ಯಾಂಡರ್ಡ್ (ನಿಯಮಿತ) ಎಂದು ವರ್ಗೀಕರಿಸಲಾದ ಅರ್ಹ ಸಾಲ ಖಾತೆಗಳಿಗೆ ಮಾತ್ರ ಅನುತ್ಪಾದಕ ಸಾಲ (ಎನ್.ಪಿ.ಎ) ಖಾತೆಗಳನ್ನು ಹೊರತುಪಡಿಸಿ ರೈತರಿಂದ ಅರ್ಜಿ ನಿರೀಕ್ಷಿಸದೇ ಬ್ಯಾಂಕುಗಳು ಸ್ವಯಂ ಪ್ರೇರಿತವಾಗಿ ಸಾಲ ಮರು ರಚನೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಲ ಮರು ರಚನೆಯ ನಂತರವು ಕೃಷಿ ಹಾಗೂ ಜೀವನಧಾರ ಚಟುವಟಿಕೆಗಳಿಗೆ ಅಗತ್ಯವಿರುವ ಹೊಸ ಸಾಲ ಒದಗಿಸಬೇಕು. ಬೆಳೆ ವಿಮೆ ಪರಿಹಾರಕ್ಕಾಗಿ ಕಾಯದೇ ಸಾಲ ಮರು ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬರ ಪೀಡಿತ ರೈತರಿಗೆ ಸಕಾಲದಲ್ಲಿ ಪರಿಹಾರ ಒದಗಿಸಲು ಬ್ಯಾಂಕುಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬ್ಯಾಂಕುಗಳ ಮೂಲಕ ಕೈಗೊಂಡಿರುವ ಕ್ರಮಗಳ ಕುರಿತು ರೈತರಿಗೆ ವ್ಯಾಪಕ ಮಾಹಿತಿ ಒದಗಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಎಂ.ಎನ್. ಸುರೇಖ, ನಬಾರ್ಡ್‍ನ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕರಾದ ಹಿತ ಸುವರ್ಣ, ವಿವಿಧ ರಾಷ್ಟ್ರೀಕೃತ, ಖಾಸಗಿ ಹಾಗೂ ಗ್ರಾಮೀಣ ಬ್ಯಾಂಕುಗಳ ವ್ಯವಸ್ಥಾಪಕರು, ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Related