ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಕಾಗದ ರಹಿತ ನೋಂದಣಿ ವ್ಯವಸ್ಥೆಗೆ ಏಪ್ರಿಲ್ 30ರಂದು ಚಾಲನೆ

ಚಾಮರಾಜನಗರ: ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ಪೋರ್ಟಲ್ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಕಾಗದರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಏಪ್ರಿಲ್ 30ರಂದು ನೂತನ ವ್ಯವಸ್ಥೆಯನ್ನು ಆರಂಭಿಸುತ್ತಿದೆ.

ನೂತನ ಕಾಗದ ರಹಿತ ನೋಂದಣಿ ವ್ಯವಸ್ಥೆಯು ನಾಗರಿಕ ಕೇಂದ್ರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ನೋಂದಣಿ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಕಾಗದ ಆಧಾರಿತ ನೋಂದಣಿ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್, ಕಾಗದರಹಿತ ವ್ಯವಸ್ಥೆಗೆ ಆಗುತ್ತಿರುವ ಪರಿವರ್ತನೆ, ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವ ವಿಧಾನದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ. 

ಹೊಸ ವ್ಯವಸ್ಥೆಯ ಪ್ರಯೋಜನಗಳು ಕೇವಲ ಸುಧಾರಣೆಯಷ್ಷೇ ಅಲ್ಲ. ಹಳೆಯ ಕೈಚಾಲಿತ ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳು ಮತ್ತು ತೊಂದರೆಗಳಿಗೆ ಸಮಗ್ರ ಪರಿಹಾರ ಒದಗಿಸಲಿವೆ. ಕಾಗದದ ವ್ಯವಸ್ಥೆಯಿಂದ ಭೌತಿಕ ದಾಖಲೆಗಳು ನಕಲಿ, ಅಕ್ಷರ ಬದಲಾವಣೆ, ಪುಟ ಬದಲಾವಣೆ ಹಾಗೂ ನಂತರದ ತಿದ್ದುಪಡಿಗಳಿಗೆ ಒಳಪಡುವ ಸಾಧ್ಯತೆ ಇರುತ್ತದೆ. ಪರಿಶೀಲನೆ ಬಹುತೇಕ ಕೈಚಾಲಿತವಾಗಿದ್ದು ದೋಷಗಳ ಸಾಧ್ಯತೆ ಹೆಚ್ಚು ಇರುತ್ತದೆ. ನೂತನ ಕಾಗದರಹಿತ ವ್ಯವಸ್ಥೆಯಿಂದ ಡಿಜಿಟಲ್ ದಾಖಲೆಗಳು ಎನ್ನಿಪ್ಪನ್, ಆಡಿಟ್ ಟ್ರೇಲ್ ಮತ್ತು ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಸುರಕ್ಷಿತವಾಗಿರುತ್ತವೆ. ಡಿಜಿಟಲ್ ಸಹಿ ಮಾಡಿದ ನಂತರ ಯಾವುದೇ ಬದಲಾವಣೆ ಪತ್ತೆಯಾಗಲಿದೆ.  

ಪ್ರಸ್ತುತ ನೋಂದಣಿ ವ್ಯವಸ್ಥೆಯಡಿ ದಾಖಲೆಗಳನ್ನು ಸಂಗ್ರಹ ಕೊಠಡಿಗಳಲ್ಲಿ ಇಡಲಾಗುತ್ತಿತ್ತು. ಇವುಗಳು ಧೀರ್ಘಕಾಲದ ಅವಧಿ, ತೇವಾಂಶ, ಕೀಟಗಳು ಅಥವಾ ಅಗ್ನಿ ಮುಂತಾದ ಕಾರಣಗಳಿಂದ ಹಾನಿಗೊಳಗಾಗಬಹುದು.  ಕಾಗದರಹಿತ ವ್ಯವಸ್ಥೆಯಡಿ ಡಿಜಿಟಲ್ ರೆಪೋಸಿಟರಿಗಳಲ್ಲಿ ಬ್ಯಾಕಪ್ ವ್ಯವಸ್ಥೆಯೊಂದಿಗೆ ಸಂಗ್ರಹಿಸಲಾಗುತ್ತದೆ. ದೀರ್ಘಕಾಲದವರೆಗೆ ಹಾನಿಯಿಲ್ಲದೆ ಉಳಿಯುತ್ತವೆ ಮತ್ತು ತಕ್ಷಣ ಲಭ್ಯವಾಗುತ್ತವೆ. ಕಾಗದ ರಹಿತ ವ್ಯವಸ್ಥೆಯಡಿ ದಾಖಲೆಗಳು ಸಾಗಾಟ ಅಥವಾ ಸಂಗ್ರಹಣೆಯಲ್ಲಿ ಕಳೆದುಹೋಗುವ ಸಾಧ್ಯತೆ ಇದೆ. ಕಾಗದ ರಹಿತ ವ್ಯವಸ್ಥೆಯಡಿ ಡಿಜಿಟಲ್ ದಾಖಲೆಗಳಿಗೆ ಈ ಅಪಾಯವಿಲ್ಲ. ಬ್ಯಾಕಪ್ ಮೂಲಕ ಯಾವಾಗಲೂ ಪುನಃ ಪಡೆಯಬಹುದಾಗಿದೆ. 

ಕಾಗದ ರಹಿತ ನೋಂದಣಿ ವ್ಯವಸ್ಥೆಯಿಂದ ಒಂದೇ ಡಿಜಿಟಲ್ ದಾಖಲೆ ಎಲ್ಲ ಹಂತಗಳಿಗೆ ಸಾಕಾಗುತ್ತದೆ. ಕಾಗದ ಬಳಕೆ ಕಡಿಮೆಯಾಗಿದ್ದು ಪರಿಸರ ಸಂರಕ್ಷಣೆಗೆ ಸಹಕಾರಿ. ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿ ಮೂಲಕ ವೇಗವಾದ ಮತ್ತು ನಿಖರ ಪರಿಶೀಲನೆ ಸಾಧ್ಯ.ವಾಗಲಿದೆ. ಆನ್‍ಲೈನ್ ಮೂಲಕ ಎಲ್ಲಿಂದ ಬೇಕಾದರೂ ದಾಖಲೆಗಳನ್ನು ಪಡೆಯಬಹುದು. ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಿಂದ ಸಮಯ ವಿಳಂಬಕ್ಕೆ ಅವಕಾಶವಾಗದೆ ವೇಗವಾಗಿ ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ಹಂತವೂ ಡಿಜಿಟಲ್ ಟ್ರಾಕಿಂಗ್ ಮೂಲಕ ಪಾರದರ್ಶಕವಾಗಿರುತ್ತದೆ. ಆಧಾರ್, ಆನ್‍ಲೈನ್ ಪಾವತಿ ಮತ್ತು ಇ-ರೆಕಾರ್ಡ್‍ಗಳೊಂದಿಗೆ ಸಮನ್ವಯ ಇರಲಿದೆ. 

ಕಾವೇರಿ 2.0 ಪೋರ್ಟಲ್‍ನಡಿ ಅನುಷ್ಠಾನವಾಗುತ್ತಿರುವ ಕಾಗದರಹಿತ ನೋಂದಣಿ ಪ್ರಕ್ರಿಯೆ ಸರಳ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನೂತನ ವ್ಯವಸ್ಥೆಯು ಡಿಜಿಟಲ್ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಕಾಗದರಹಿತ ನೋಂದಣಿ ವ್ಯವಸ್ಥೆಯ ಮೂಲಕ ಪಾರದರ್ಶಕತೆ, ವೇಗ ಮತ್ತು ನಾಗರಿಕರಿಗೆ ಅನುಕೂಲ ಹೆಚ್ಚಲಿದೆ.  

  ಕಾಗದರಹಿತ ನೋಂದಣಿ ಪ್ರಕ್ರಿಯೆ ವ್ಯವಸ್ಥೆಗೆ ಏಪ್ರಿಲ್ 30ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮಿನಿ ವಿಧಾನಸೌಧದಲ್ಲಿರುವ (ತಹಶೀಲ್ದಾರ್ ಕಚೇರಿ) ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಮುಲೈ ಮುಹಿಲನ್ ಎಂ.ಪಿ. ಅವರು ಚಾಲನೆ ನೀಡಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ನೋಂದಣಾಧಿಕಾರಿ ಕಿರಣ್ ಸಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *