ಸ್ವಾತಂತ್ರ್ಯ ಎಂದರೆ ಸಮಾನತೆ : ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಭಿಮತ

  • ಸಮಾನ ಅವಕಾಶ, ಪ್ರತಿಯೊಬ್ಬ ಭಾರತೀಯನ ಘನತೆಯ ಬದುಕು
ಚಾಮರಾಜನಗರ: ಅಸಂಖ್ಯಾತ ಜನರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ದೇಶವು ಸ್ವಾತಂತ್ರ್ಯ ಪಡೆದಿದ್ದು, ಸ್ವಾತಂತ್ರ್ಯ ಎಂದರೆ ಸಮಾನತೆ, ಸಮಾನ ಅವಕಾಶ ಹಾಗೂ ಪ್ರತಿಯೊಬ್ಬ ಭಾರತೀಯನ ಘನತೆಯ ಬದುಕಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.  

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರಬೋಸ್, ಸರ್ದಾರ್ ವಲ್ಲಬಾಯ್ ಪಟೇಲ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಾಲಗಂಗಾಧರ ತಿಲಕ್, ಲಾಲಾ ಲಜಪತ ರಾಯ್ ಸೇರಿದಂತೆ ಅನೇಕ ಮಹನೀಯರಿದ್ದಾರೆ. ಕರ್ನಾಟಕವು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ವೀರಪ್ಪ, ಉಳ್ಳಾಲದ ರಾಣಿ ಅಬ್ಬಕ್ಕ ಸೇರಿದಂತೆ ಅನೇಕ ವೀರರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅವಶ್ಯವಿದೆ ಎಂದರು. 
  
ಸ್ವಾತಂತ್ರ್ಯ ನಂತರ ಭಾರತವು ಪ್ರಜಾಪ್ರಭುತ್ವದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಖಾತರಿಪಡಿಸಿದೆ. ಈ ಸುಸಂದರ್ಭದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭಾರತೀಯರಾದ ನಾವೆಲ್ಲರೂ ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸುವುದು ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.  

ಅಭಿವೃದ್ದಿ ಎಂದರೆ ಕೇವಲ ನಗರಗಳ ಪ್ರಗತಿಯಲ್ಲ. ಪ್ರತಿಯೊಂದು ಹಳ್ಳಿಹಳ್ಳಿಗಳು ಅಭಿವೃದ್ದಿಯಾಗಬೇಕು, ಪ್ರತಿಯೊಬ್ಬ ರೈತನ ಬದುಕು ಸುಧಾರಿಸಬೇಕು, ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆಯಬೇಕು, ಪ್ರತಿಯೊಬ್ಬ ಯುವಕ, ಯುವತಿಗೂ ಉದ್ಯೋಗ ಮತ್ತು ಕೌಶಲ್ಯದ ಅವಕಾಶ ದೊರೆಯಬೇಕು. ಪ್ರತಿಯೊಬ್ಬ ಮಹಿಳೆಯು ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು ಇದೇ ನಮ್ಮ ಸರ್ಕಾರದ ದೃಷ್ಟಿಕೋನವಾಗಿದೆ ಎಂದು ಸಚಿವರು ಹೇಳಿದರು.  

ಮುಖ್ಯಮಂತ್ರಿಗಳು ಮೊದಲ 100 ದಿನಗಳಲ್ಲಿ ಸರ್ಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ನಿಗದಿಪಡಿಸಿದ್ದು ಇದರ ಸಾಧನೆಗಾಗಿ ಮುಂದಾಗುತ್ತಿದ್ದೇವೆ. ರೈತಮಿತ್ರ, ಬಡವರ ಬಂಧು ಕಾರ್ಯಕ್ರಮದಡಿ ಒಂದು ಹೆಕ್ಟೇರ್‍ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇಕಡ 50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಗ್ರಾಮಾನುಭವ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕøತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯವನ್ನು ಏರ್ಪಡಿಸಲಾಗುತ್ತದೆ ಎಂದರು. 

ಯುವ ಯುಗ–ಯುವ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ್ ಜೋಡೋ ಯುವಕ ಸಂಘ ಮಿಷನ್ ಯೋಜನೆಯಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪನೆ ವಾರ್ಷಿಕ ತಲಾ 10 ಲಕ್ಷ ರೂ. ಅನುದಾನದಂತೆ ವಾರ್ಷಿಕ 1000 ಕೋಟಿಗಳ ವೆಚ್ಚ ಮಾಡಲಾಗುತ್ತದೆ ಸಂಘ ಸ್ಥಾಪನೆ ಮೂಲಕ ಯುವಕರಲ್ಲಿ ಆರೋಗ್ಯ, ಕೌಶಲ್ಯ, ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡಲಾಗುವುದು. ಯುವ ಉದ್ಯೋಗ ಸೇತು ಕಾರ್ಯಕ್ರಮದಡಿ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರಿ ಅಸ್ಪತ್ರೆಗಳ ದತ್ತು ಯೋಜನೆಯಡಿ ರಾಜ್ಯದ ಮೆಡಿಕಲ್ ಕಾಲೇಜುಗಳು ಸಿಹೆಚ್‍ಸಿ ಮತ್ತು ಪಿಹೆಚ್‍ಸಿ ಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜನ ನೀಡಲಾಗುವುದು ಎಂದು ಜಿಲ್ಲಾ ಸಚಿವರು ಹೇಳಿದರು.

ನಶೆ ಮುಕ್ತ ಕರ್ನಾಟಕ ಕಾರ್ಯಕ್ರಮದಡಿ ಯುವಕರಲ್ಲಿ ಜಾಗೃತಿ ಮೂಡಿಸಿ ತ್ಯಜಿಸುವಿಕೆ, ತಿಳಿಸು, ಬೆಂಬಲ ಮತ್ತು ಸಬಲೀಕರಣ ಉಪಕ್ರಮಗಳ ಮೂಲಕ ನಶೆ ಪದಾರ್ಥಗಳ   ವ್ಯಸನ ಮುಕ್ತಗೊಳಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಪ್ರಜಾಸೇವೆ ಇಲಾಖೆಯನ್ನು ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸ್ಪಂದನೆಗೆ ಕ್ರಮವಹಿಸಲಾಗುತ್ತಿದೆ. ಭೂ ಗ್ಯಾರೆಂಟಿ ಯೋಜನೆಯಡಿ ರಾಜ್ಯದ ಎಲ್ಲಾ ಕೃಷಿಯೇತರ ಸ್ವತುಗಳಿಗೆ  ಇ-ಖಾತೆ ಸೇರಿದಂತೆ ಸಮಗ್ರ ಡಿಜಿಟಲ್ ಆರ್.ಟಿ.ಸಿ ಗಳು ಮತ್ತು ಅರ್ಹ ಬಿ-ಖಾತೆಗಳನ್ನು ಎ-ಖಾತೆಗಳಾಗಿ ಪರಿರ್ವತಿಸಿ ಭೂಮಾಲೀಕತ್ವದ ಹಕ್ಕುಗಳನ್ನು ಖಾತ್ರಿಪಡಿಸಿ ವ್ಯಾಜಗಳನ್ನು ಕಡಿಮೆ ಮಾಡಲಾಗುವುದು ಎಂದರು. 

ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ, ಬೈಪಾಸ್ ಸೇರಿದಂತೆ ಸಂಚಾರ ದಟ್ಟಣೆ ಕಡಿಮೆ ಮಾಡುವ ಉಪಕ್ರಮಗಳನ್ನು ಕೈಗೊಳ್ಳಲು ಅಭಿವೃದ್ದಿ ವಲಯಗಳ ಅಧಿಸೂಚನೆ ಮಾಡಲಾಗುವುದು. ಇದರಿಂದ ನಗರಗಳ ಯೋಜಿತ ಬೆಳವಣಿಗೆಗೆ ಸಹಕಾರಿ ಆಗಲಿದೆ. ತೇಗದ ಸಿರಿ ಕಾರ್ಯಕ್ರಮದ ಮೂಲಕ ವಾಣಿಜ್ಯ ಮೌಲ್ಯವುಳ್ಳ ತೇಗ ಸೇರಿದಂತೆ ಇತರೆ ಮರಗಳನ್ನು ಜಮೀನಿನ ಮಾಲೀಕರು, ಅವರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಜಾಗಗಳಲ್ಲಿ ಬೆಳಸಲು ಪೆÇ್ರೀತ್ಸಾಹ ನೀಡಲಾಗುವುದು. ಸದರಿ ಮರಗಳ ಮಾರಾಟದಿಂದ ಬರುವ ರಾಜಸ್ವದ ಶೇಕಡ 70 ರಷ್ಟು ಭೂ ಮಾಲೀಕರಿಗೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *