ಗನವ ಫೌಂಡೇಶನ್‌ ನಿಂದ ಸ್ವತಂತ್ರ್ಯ ದಿನಾಚರಣೆ

ಮೈಸೂರು : ನಗರದ ಕೆಸರೆಯಲ್ಲಿ ಇರುವ ಗನವ ಫೌಂಡೇಶನ್ ವತಿಯಿಂದ ಶನಿವಾರ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಮಖ್ಯ ಅತಿಥಿಯಾಗಿ ಆಗಮಿಸಿದ್ದ, ಮೈಸೂರು ವಿಶ್ವ ವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ.ಜೆ.ಲೋಹಿತ್ ಮಾತನಾಡಿ, ಅನೇಕ ಮಹನೀಯರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ನಮಗೆ ಈ ಸ್ವಾತಂತ್ರ‍್ಯ ಸಿಕ್ಕಿದೆ. ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ 1857ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಪ್ರಮುಖ ಸ್ಥಾನ ಪಡೆಯುತ್ತದೆ. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿದ ಈ ಹೋರಾಟವು ಭಾರತದ ಸ್ವಾತಂತ್ರ‍್ಯ ಚಳವಳಿಗೆ ಮಹತ್ವದ ತಿರುವು ನೀಡಿತು ಎಂದರು.

ಮಂಗಲ್ ಪಾಂಡೆ ಅವರಂತಹ ವೀರರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬಹದ್ದೂರ್ ಶಾ ಜಫರ್, ತಾತ್ಯಾ ಟೋಪೆ, ನಾನಾ ಸಾಹೇಬ್ ಸೇರಿದಂತೆ ಅನೇಕರು ಬ್ರಿಟಿಷರ ವಿರುದ್ಧ ಹೋರಾಡಿದರು. ಈ ಹೋರಾಟ ಭಾರತೀಯರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಮತ್ತಷ್ಟು ಉರಿಸಿತು. ನಂತರದ ವರ್ಷಗಳಲ್ಲಿ ಮಹಾತ್ಮ ಗಾಂಧೀಜಿ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸ್ವಾತಂತ್ರ‍್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರೈ, ಬಿಪಿನ್ ಚಂದ್ರ ಪಾಲ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ‍್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದರು.

ಕೊನೆಗೆ 1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆಯಿತು. ಆ ದಿನ ನಮ್ಮ ಇತಿಹಾಸದ ಅತ್ಯಂತ ಹೆಮ್ಮೆಯ ದಿನ. ಸ್ವಾತಂತ್ರ‍್ಯ ಎಂದರೆ ಕೇವಲ ವಿದೇಶಿ ಆಡಳಿತದಿಂದ ಮುಕ್ತಿ ಪಡೆಯುವುದಲ್ಲ. ದೇಶದ ಏಕತೆ, ಶಾಂತಿ, ಪ್ರಜಾಪ್ರಭುತ್ವ, ಶಿಕ್ಷಣ, ಸಮಾನತೆ ಮತ್ತು ಜವಾಬ್ದಾರಿಯುತ ನಾಗರಿಕತ್ವವನ್ನು ಕಾಪಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ. ಇಂದು ನಾವು ನಮ್ಮ ಸ್ವಾತಂತ್ರ‍್ಯ ಹೋರಾಟಗಾರರನ್ನು ಗೌರವದಿಂದ ಸ್ಮರಿಸೋಣ. ದೇಶದ ಅಭಿವೃದ್ಧಿಗೆ ನಮ್ಮ ಕೈಲಾದ ಕೊಡುಗೆಯನ್ನು ನೀಡೋಣ. “ದೇಶ ಮೊದಲು, ನಾವು ನಂತರ” ಎಂಬ ಮನೋಭಾವವನ್ನು ಬೆಳೆಸೋಣ ಎಂದು ಸಲಹೆ ನೀಡಿದರು.

ಗನವ ಫೌಂಡೇಶನ್ ಅಧ್ಯಕ್ಷ ಹೇಮಂತ್ ನಾಗರಾಜು ಮಾತನಾಡಿ, ನಮ್ಮ ಭಾರತ ದೇಶವು 1947 ಆಗಸ್ಟ್ 15 ರಂದು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ ಪಡೆದು ಸ್ವತಂತ್ರವಾಯಿತು. ಸ್ವಾತಂತ್ರ‍್ಯ ಎಂದರೆ ಕೇವಲ ಹಕ್ಕುಗಳನ್ನು ಅನುಭವಿಸುವುದಲ್ಲ. ಅದು ದೇಶದ ಕಡೆಗಿನ ಜವಾಬ್ದಾರಿಯೂ ಹೌದು. ವಿವಿಧ ಭಾಷೆ, ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ‘ವೈವಿಧ್ಯತೆಯಲ್ಲಿ ಏಕತೆ’ಯೇ ನಮ್ಮ ದೊಡ್ಡ ಶಕ್ತಿಯಾಗಿದೆ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ‍್ಯದ ಹಿಂದೆ ಲಕ್ಷಾಂತರ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳಿವೆ. ಸ್ವಾತಂತ್ರ‍್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ನಾವೆಲ್ಲರೂ ಉತ್ತಮ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ದೇಶದಲ್ಲಿ ಶಾಂತಿ, ಸಮಾನತೆ ಮತ್ತು ಒಗ್ಗಟ್ಟು ಕಾಪಾಡುವುದು ನಮ್ಮ ಕರ್ತವ್ಯ. ಭ್ರಷ್ಟಾಚಾರ ರಹಿತ ಮತ್ತು ಸ್ವಚ್ಛ ಭಾರತ ನಿರ್ಮಾಣ ಮಾಡಲು ನಾವೆಂದಿಗೂ ಬದ್ಧರಾಗಿರಬೇಕು. ಕೊನೆಯಲ್ಲಿ, ನಮ್ಮ ಮಾತೃಭೂಮಿಯ ರಕ್ಷಣೆ ಮತ್ತು ಪ್ರಗತಿಗಾಗಿ ನಾವೆಲ್ಲರೂ ಒಂದಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಕಾರ್ಯದರ್ಶಿ ಎ.ಎಸ್.ಸಂಗೀತಾ, ಮುಖಂಡರಾದ ಡಾ.ಉಪೇಂದ್ರ, ಎನ್.ಗುರುರಾಜ್ ಬಸವರಾಜ್ ಸೊನ್ನದ್, ಜೆ.ಪ್ರವೀಣ್ ಕುಮಾರ್, ಆರ್.ರವಿ, ಶ್ರೀವತ್ಸ ಶರ್ಮ , ತೆರೆಸಮ್ಮ, ಸುಧಾ, ಕೆಂಪರಾಜು ಇತರರು ಇದ್ದರು.

Leave a Reply

Your email address will not be published. Required fields are marked *