ಆತ್ಮನಿರ್ಭರ, ಸಾಮಾಜಿಕ ನ್ಯಾಯ ಖಾತ್ರಿಪಡಿಸುವ ದೇಶವನ್ನಾಗಿ ರೂಪಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ : ಚಾಮರಾಜನಗರ ವಿ.ವಿ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್

ಚಾಮರಾಜನಗರ: ಭಾರತವು 2047ರಲ್ಲಿ ಸ್ವಾತಂತ್ರೋತ್ಸವ ಶತಮಾನೋತ್ಸವ ಆಚರಿಸುವ ವೇಳೆಗೆ ಅಭಿವೃದ್ಧಿ ಹೊಂದಿದ, ಜ್ಞಾನಾಧಾರಿತ, ಸಮಾನತೆಯುತ, ಆತ್ಮನಿರ್ಭರ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ರಾಷ್ಟ್ರವನ್ನಾಗಿ ರೂಪಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಅವರಣದಲ್ಲಿಂದು ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಬಳಿಕ ಕಾರ್ಯಕ್ರಮವನ್ನು ಉದ್ದೇಶೀಸಿ ಅವರು ಮಾತನಾಡಿದರು.

ಸ್ವಾತಂತ್ರ್ಯವೆಂದರೆ ನಿಜಕ್ಕೂ ತ್ಯಾಗದ ಫಲ. ಭಾರತದ ಸ್ವಾತಂತ್ರ್ಯವು ಅನೇಕ ತಲೆಮಾರುಗಳ ತ್ಯಾಗ, ಹೋರಾಟ, ಜೈಲುಶಿಕ್ಷೆ, ಬಲಿದಾನ ಮತ್ತು ಅಚಲ ದೇಶಪ್ರೇಮವಾಗಿದೆ. ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸಾಮಾನ್ಯ ಜನರನ್ನೇ ಸ್ವಾತಂತ್ರ್ಯ ಹೋರಾಟದ ಶಕ್ತಿಯನ್ನಾಗಿ ರೂಪಿಸಿದರು. ಜವಾಹರಲಾಲ್ ನೆಹರು ಅವರು ಆಧುನಿಕ, ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಭಾರತದ ಕನಸನ್ನು ಕಂಡರು. ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಏಕತೆ ಮತ್ತು ಅಖಂಡತೆಗೆ ಅಪಾರ ಕೊಡುಗೆ ನೀಡಿದರು ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯಕ್ಕೆ ಸಾಮಾಜಿಕ ನ್ಯಾಯದ ಅರ್ಥವನ್ನು ನೀಡಿದರು. ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯವನ್ನು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನಾಗಿ ರೂಪಿಸಿದರು. ಸುಭಾμï ಚಂದ್ರ ಬೋಸ್ ಅವರ ಅಪ್ರತಿಮ ದೇಶಭಕ್ತಿ, ಭಗತ್ ಸಿಂಗ್ ಅವರ ಕ್ರಾಂತಿಕಾರಿ ಚಿಂತನೆ ಮತ್ತು ಬಲಿದಾನ, ಚಂದ್ರಶೇಖರ ಆಜಾದ್, ಲಾಲಾ ಲಜಪತ್ ರೈ, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಸರೋಜಿನಿ ನಾಯ್ಡು, ಅನ್ನಿಬೆಸೆಂಟ್, ಅರುಣಾ ಆಸಫ್ ಅಲಿ, ಕಸ್ತೂರಬಾ ಗಾಂಧೀಜಿ, ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅಸಂಖ್ಯಾತ ಹೋರಾಟಗಾರರ ತ್ಯಾಗಗಳು ಭಾರತದ ಸ್ವಾತಂತ್ರ್ಯದ ಇತಿಹಾಸದ ಅಮೂಲ್ಯ ಅಧ್ಯಾಯಗಳಾಗಿವೆ ಎಂದರು.

ಕರ್ನಾಟಕದಲ್ಲಿಯೂ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಉಳ್ಳಾಲದ ರಾಣಿ ಅಬ್ಬಕ್ಕ, ಮೈಲಾರ ಮಹದೇವ, ಗಂಗಾಧರರಾವ್ ದೇಶಪಾಂಡೆ, ಹಾರ್ಡೇಕರ್ ಮಂಜಪ್ಪ ಸೇರಿದಂತೆ ಅನೇಕರು ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ನಾವು ಅವರ ತ್ಯಾಗವನ್ನು ಕೇವಲ ಸ್ಮರಿಸಿ ಅವರು ಕನಸು ಕಂಡ ಭಾರತವನ್ನು ನಿರ್ಮಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಪ್ರತಿಯೊಬ್ಬ ಭಾರತೀಯನ ಬದುಕಿನಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯವಾಗಿ ಪರಿವರ್ತಿಸುವುದು ನಮ್ಮ ಮುಂದಿರುವ ಗುರಿಯಾಗಿದೆ ಎಂದು ಅವರು ಹೇಳಿದರು.

2047ರ ವಿಕಸಿತ ಭಾರತಕ್ಕೆ ಶಿಕ್ಷಣವೇ ಅಡಿಪಾಯ ವಿಕಸಿತ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳಬೇಕಾದರೆ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಾಗದೇ, ಅದು ಬಡತನವನ್ನು ನಿವಾರಿಸುವ, ಅಸಮಾನತೆಯನ್ನು ಕಡಿಮೆ ಮಾಡುವ, ವೈಜ್ಞಾನಿಕ ಮನೋಭಾವ ಬೆಳೆಸುವ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಶಕ್ತಿಯಾಗಿದೆ. ಭಾರತವು ಜ್ಞಾನ ಮತ್ತು ಕೌಶಲ್ಯ ಆಧಾರಿತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಗ್ರಾಮೀಣ ವಿದ್ಯಾರ್ಥಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಯವರೆಗೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬಡತನದಿಂದ ಅವಕಾಶದತ್ತ ವಿಕಸಿತ ಭಾರತದ ಗುರಿ ಕೇವಲ ದೇಶದ ಒಟ್ಟು ಆರ್ಥಿಕ ಬೆಳವಣಿಗೆಯಲ್ಲಿ ಸೀಮಿತವಾಗಬಾರದು. ಅಭಿವೃದ್ಧಿಯ ಫಲವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಶಿಕ್ಷಣದ ಕೊರತೆ ಮತ್ತು ಅವಕಾಶಗಳ ಅಸಮಾನತೆಯನ್ನು ನಿವಾರಿಸುವುದರ ಮೂಲಕವೇ ನಿಜವಾದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. ಒಂದು ಬಡ ಕುಟುಂಬದ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ದೊರೆತು, ಆತ ಕೌಶಲ್ಯ ಪಡೆದು ಉದ್ಯೋಗ ಅಥವಾ ಉದ್ಯಮದ ಮೂಲಕ ಸ್ವಾವಲಂಬಿಯಾದಾಗ, ಅದು ಕೇವಲ ಒಬ್ಬ ವ್ಯಕ್ತಿಯ ಯಶಸ್ಸಲ್ಲ, ಒಂದು ಕುಟುಂಬದ ಮತ್ತು ಮುಂದಿನ ಪೀಳಿಗೆಯ ಸಾಮಾಜಿಕ–ಆರ್ಥಿಕ ಪರಿವರ್ತನೆಯಾಗಿದೆ ಎಂದರು.

ಅಸಮಾನತೆ ಮುಕ್ತ ಭಾರತವೇ ವಿಕಸಿತ ಭಾರತ 2047ರ ವಿಕಸಿತ ಭಾರತದ ಕನಸು ಸಾಕಾರಗೊಳ್ಳಬೇಕಾದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಲಿಂಗ ಅಸಮಾನತೆಯನ್ನು ಕಡಿಮೆ ಮಾಡಬೇಕು. ಅಭಿವೃದ್ಧಿಯ ಅವಕಾಶಗಳು ಕೆಲವೇ ವರ್ಗಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳು, ಹಿಂದುಳಿದ ಸಮುದಾಯಗಳು, ಮಹಿಳೆಯರು, ಯುವಜನರು ಮತ್ತು ಅವಕಾಶ ವಂಚಿತ ವರ್ಗಗಳಿಗೂ ತಲುಪಬೇಕು. ಅಭಿವೃದ್ಧಿಯ ವೇಗಕ್ಕಿಂತ ಅಭಿವೃದ್ಧಿಯ ವ್ಯಾಪ್ತಿ ಮುಖ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ವಿಕಸಿತ ಭಾರತದ ಕನಸು ಸಾರ್ಥಕವಾಗುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯಗಳು ವಿಕಸಿತ ಭಾರತದ ಜ್ಞಾನಕೇಂದ್ರಗಳಾಗಬೇಕು. 2047ರ ಭಾರತವನ್ನು ನಿರ್ಮಿಸುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪದವಿ ನೀಡುವುದರ ಜೊತೆಗೆ ಸಂಸ್ಥೆಗಳಲ್ಲಿ ಜ್ಞಾನ ಸೃಷ್ಟಿ, ಸಂಶೋಧನೆ, ನವೋದ್ಯಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳುವ ಸಂಶೋಧನೆಗೆ ಆದ್ಯತೆ ನೀಡಬೇಕು. ಬಡತನ, ಕೃಷಿ, ಗ್ರಾಮೀಣ ಅಭಿವೃದ್ಧಿ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ಆರೋಗ್ಯ, ಪರಿಸರ ಸಂರಕ್ಷಣೆ, ನೀರಿನ ನಿರ್ವಹಣೆ, ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ಬಳಕೆಯಂತಹ ಕ್ಷೇತ್ರಗಳಲ್ಲಿ ವಿಶ್ವವಿದ್ಯಾನಿಲಯಗಳು ಸಮಾಜದೊಂದಿಗೆ ನೇರವಾಗಿ ಕೆಲಸ ಮಾಡಬೇಕು ಎಂದರು.

ಯುವಜನರೇ 2047ರ ಭಾರತದ ನಿರ್ಮಾತೃಗಳು 2047ರಲ್ಲಿ ಭಾರತವು ವಿಕಸಿತ ರಾಷ್ಟ್ರವಾಗಬೇಕಾದರೆ ಇಂದಿನ ಯುವಜನರ ಪಾತ್ರ ನಿರ್ಣಾಯಕವಾಗಿದೆ. ಯುವಜನರು ಬರಿ ಉದ್ಯೋಗ ಪಡೆಯುವವರಾಗದೆ ಉದ್ಯೋಗ ಸೃಷ್ಟಿಸುವವರಾಗಬೇಕು. ಕೃತಕ ಬುದ್ಧಿಮತ್ತೆ, ವಿಜ್ಞಾನ ಮತ್ತು ತಂತ್ರಜ್ಞಾನ, ನವೋದ್ಯಮ, ಸಂಶೋಧನೆ, ಸ್ಟಾರ್ಟ್‍ಅಪ್‍ಗಳು, ಹಸಿರು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ಅದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆ, ಪರಿಸರ ಸಂರಕ್ಷಣೆ, ಸಂವಿಧಾನದ ಮೌಲ್ಯಗಳ ಅರಿವು, ಸಾಮಾಜಿಕ ಸಾಮರಸ್ಯ, ಮತದಾನದ ಜವಾಬ್ದಾರಿ, ಸಾರ್ವಜನಿಕ ಆಸ್ತಿಯ ರಕ್ಷಣೆ ಮತ್ತು ಸಮಾಜ ಸೇವೆಯಂತಹ ಕ್ಷೇತ್ರಗಳಲ್ಲಿಯೂ ಯುವಜನರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರೊ. ಗಂಗಾಧರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಪೆÇ್ರ. ಕೆ.ಎಂ. ಮಹಾದೇವನ್, ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಮಹೇಶ್, ಎಲ್ಲಾ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *