
ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ: ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಶ್ರೀ ಅಜ್ಜಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಯ ವಿಗ್ರಹದ ಮೆರವಣಿಗೆಯು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.

ತೆರೆದ ವಾಹನದಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ವೀರಗಾಸೆ, ಕರಡಿಗೊಂಬೆಗಳು, ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವರ ಮೂರ್ತಿಗೆ ಮಹಿಳೆಯರು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಶ್ರೀ ಮಹಾಗಣಪತಿ ಸೇವಾ ಸಮಿತಿಯವರು, ಯುವಕರು ವಾದ್ಯದ ಸದ್ದಿಗೆ ಹೆಜ್ಜೆ ಹಾಕಿ ನೃತ್ಯ ಮಾಡುವ ಮೂಲಕ ಸಂಭ್ರಮಿಸಿ ಗ್ರಾಮದ ಕಾಳನಕಟ್ಟೆ ಕೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯನ್ನು ಮಾಡಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಗಣೇಶನ ಹಬ್ಬದಂದು ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ವಿಶೇಷ ಪೂಜಾ ಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ಮಾಡಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣ ಕಾರ್ಯಕ್ರಮ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಇದರ ಜೊತೆಗೆ ರಸಮಂಜರಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಸೇವಾ ಸಮಿತಿಯು ಪಾತ್ರವಾಗಿದೆ.
ಈ ದೇವತಾ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಜನಪ್ರತಿನಿಧಿಗಳು, ಮುಖಂಡರುಗಳು, ಸೇರಿದಂತೆ ಗ್ರಾಮಸ್ಥರುಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
