ಚಾಮರಾಜನಗರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಸಲು ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಫೆಬ್ರವರಿ 17ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ನೋಂದಣಿ ಮಾಡಿಕೊಳ್ಳಬಹುದು.
ಕಡಲೆಕಾಳು ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ಗೆ 5,875 ರೂ. ದರ ನಿಗದಿಪಡಿಸಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಸಂಸ್ಥೆ ವತಿಯಿಂದ ಖರೀದಿ ಮಾಡಲಾಗುವುದು.
ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ/ಆರ್ಟಿಸಿ, ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ (ಆಧಾರ್ ಜೋಡಣೆ ಕಡ್ಡಾಯ) ಭಾವಚಿತ್ರ ಹಾಗೂ ಫ್ರೂಟ್ಸ್ ತಂತ್ರಾಂಶದ ರೈತ ನೋಂದಣಿ ಸಂಖ್ಯೆ (ಎಫ್ಐಡಿ) ಯನ್ನು ಕಡ್ಡಾಯವಾಗಿ ತರಬೇಕು. ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಕೃಷಿ ಇಲಾಖೆಯಿಂದ ಫ್ರೂಟ್ಸ್ ತಂತ್ರಾಂಶದ ರೈತ ನೋಂದಣಿ ಸಂಖ್ಯೆ (ಎಫ್ಐಡಿ) ಯನ್ನು ಪಡೆಯಬೇಕು.
ಕಡಲೆಕಾಳು ಬೆಳೆದು ಬೆಳೆ ಸಮೀಕ್ಷೆಯಲ್ಲಿ ಕಡಲೆಕಾಳು ಬೆಳೆ ಎಂದು ಆರ್ಟಿಸಿ ವಾರು ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಯೋಜನೆಯಡಿಯಲ್ಲಿ ಎಕರೆಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 40 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣವiಟ್ಟದ ಕಡಲೆಕಾಳನ್ನು ಮಾತ್ರ ಖರೀದಿಸಲಾಗುವುದು. ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮುಖಾಂತರ ಹಣ ಪಾವತಿಸಲಾಗುವುದು.
ರೈತರ ನೋಂದಣಿ ಕಾರ್ಯವು ಫೆಬ್ರವರಿ 17 ರಿಂದ ಪ್ರಾರಂಭಗೊಳ್ಳುತ್ತಿದ್ದು, ಜಿಲ್ಲೆಯ ಎಲ್ಲಾ ರೈತ ಬಾಂಧವರು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡುವ ಮೂಲಕ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಚಾಮರಾಜನಗರದ ಶಾಖಾ ವ್ಯವಸ್ಥಾಪಕರು ಮೊ.ಸಂ 9449864455 ಸಂಪರ್ಕಿಸಬಹುದು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚಾಮರಾಜನಗರ ಕಾರ್ಯದರ್ಶಿ ಮೊ.ಸಂ 7406474389, ಗುಂಡ್ಲುಪೇಟೆ ಕಾರ್ಯದರ್ಶಿ ಮೊ.ಸಂ 9844211885, ಕೊಳ್ಳೇಗಾಲ ಕಾರ್ಯದರ್ಶಿ ಮೊ.ಸಂ 8762898394, ಹನೂರು ಕಾರ್ಯದರ್ಶಿ ಮೊ.ಸಂ 9686707090 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Related