ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗೆ ಮೂಲಸೌಲಭ್ಯ : ಶಾಸಕ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಪ್ರಗತಿಗೆ ಅವಶ್ಯ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಮಹಿಳೆಯರ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2025-26ನೇ ಸಾಲಿನ ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಆಗಿರುವ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿದರು.

ಚಾಮರಾಜನಗರ ಪಟ್ಟಣದಲ್ಲಿ ಕಳೆದ ಒಂಬತ್ತು ವರ್ಷಗಳ ಹಿಂದೆ ಮೂವತ್ತು ಮಂದಿ ವಿದ್ಯಾರ್ಥಿಗಳ ದಾಖಲಾತಿಯಿಂದ ಆರಂಭವಾದ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮಹಿಳಾ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ. ಪ್ರಸಕ್ತ 2026-27ನೇ ಸಾಲಿಗೆ ಇಡೀ ಜಿಲ್ಲೆಯಲ್ಲಿಯೇ ಅತಿಹೆಚ್ಚಿನ ಮಹಿಳಾ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಇದು ಮಹಿಳಾ ವಿದ್ಯಾರ್ಥಿಗಳ, ಮಹಿಳೆಯರ ಅಭಿವೃದ್ಧಿಯ ಮಾನದಂಡ ಹಾಗೂ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರು.

ನಂಜುಂಡಪ್ಪ ಆಯೋಗದ ವರದಿಯನ್ವಯ ಗುರುತಿಸಲಾದ ಹಿಂದುಳಿದ ತಾಲೂಕುಗಳಲ್ಲಿ ಚಾಮರಾಜನಗರ ಹಾಗೂ ಎಚ್.ಡಿ. ಕೋಟೆ ಮಾತ್ರ ಅತೀ ಹಿಂದುಳಿದ ತಾಲೂಕುಗಳಾಗಿದ್ದವು. ಕರ್ನಾಟಕದಲ್ಲಿ ಬರ ಎಂದರೇ ಪಟ್ಟಿಯಲ್ಲಿ ಮೊದಲು ಚಾಮರಾಜನಗರ ಇರುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರ ಪರಿಣಾಮವಾಗಿ ಬದಲಾವಣೆಯ ಗಾಳಿ ಬೀಸಿದೆ. ಪಾಲಿಟೆಕ್ನಿಕ್, ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು, ಕೃಷಿ, ಕ್ರೀಡೆ, ವಸತಿಯುಕ್ತ ಕಾಲೇಜು, ಕಿತ್ತೂರು ಚೆನ್ನಮ್ಮ, ಮೊರಾರ್ಜಿ ಶಾಲೆಗಳ ಸ್ಥಾಪನೆ ಮೂಲಕ ಸರ್ಕಾರವು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ ಎಂದು ಶಾಸಕರು ತಿಳಿಸಿದರು.

ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 110 ಕೋಟಿ ರೂ. ವೆಚ್ಚದ ಮಾಲಂಗಿ ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪ್ರಮುಖ ನೀರಾವರಿ ಯೋಜನೆಗಳು ಜಾರಿಗೊಂಡಿವೆ. ಒಳಚರಂಡಿ ನಿರ್ಮಾಣಕ್ಕಾಗಿ 163 ಕೋಟಿ ರೂ.ಗಳಿಗೆ ಟೆಂಡರ್ ಆಗಿದೆ. 720 ಕೋಟಿ ರೂ. ವೆಚ್ಚದಲ್ಲಿ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳನ್ನು ತುಂಬಿಸುವ ಯೋಜನೆಯು ಕಾರ್ಯರೂಪಕ್ಕೆ ಬರುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳು ಶೈಕ್ಷಣಿಕ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡಿ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು. ಮುಂದಿನ ವರ್ಷ ಮಹಿಳಾ ಕಾಲೇಜಿಗೆ ನೂತನ ಕಟ್ಟಡ ಲಭ್ಯವಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಶಿಕ್ಷಣ ಪ್ರತಿಯೊಬ್ಬರ ಜೀವನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಮಾಜದಲ್ಲಿ ಏನಾದರೂ ಬದಲಾವಣೆ ಆದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಕಾಲೇಜಿನಲ್ಲಿ ವರ್ಷಪೂರ್ತಿ ಹಲವು ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಎಸ್. ಮಹದೇವಸ್ವಾಮಿ ಅವರು ಈ ಬಾರಿ ಕಾಲೇಜಿಗೆ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಮುಂದಿನ ದಿನಗಳಲ್ಲಿ ನಗರದ ಮಿನಿ ಮಹಾರಾಣಿ ಕಾಲೇಜು ಆಗಲಿದೆ. ಭವಿಷ್ಯದ ಹಿತದೃಷ್ಠಿಯಿಂದ ನೂತನ ಕಟ್ಟಡಕ್ಕೆ 18 ಹೆಚ್ಚುವರಿ ಕೊಠಡಿಗಳ ಅವಶ್ಯವಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜಿನ ಅಭಿವೃದ್ದಿ ಸಮಿತಿ ಅಧ್ಯಕ್ಷರು ಎಂ.ಎಸ್.ಐ.ಎಲ್ ಹಾಗೂ ಸಿ.ಎಸ್.ಆರ್ ನಿಧಿಯಡಿ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು. 

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪೆÇ್ರ. ಟಿ.ಎನ್. ಶಾಂತರಾಜು ಅವರು ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದರು. 

ಇದೇ ವೇಳೆ 2025-26ನೇ ಸಾಲಿನ ಸಾಂಸ್ಕøತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ದಿ ಸಮಿತಿ ಸದಸ್ಯರಾದ ಕಾಗಲವಾಡಿ ಚಂದ್ರು, ಚಿಕ್ಕಮಹದೇವು, ಸಮೀವುಲ್ಲಾ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸಿ. ಶೈಲೇಶ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಂಚಾಲಕರಾದ ಎಸ್.ಆರ್. ದೀಪ, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಕ್ರೀಡಾ ಸಮಿತಿ ಸಂಚಾಲಕರಾದ ಡಾ. ಶಾಂತರಾಜು, ರೆಡ್ ಕ್ರಾಸ್ ಸಮಿತಿ ಸಂಚಾಲಕರಾದ ಡಾ. ಆರ್. ಪ್ರಸಾದ್, ರೇಂಜರ್ಸ್ ಮತ್ತು ರೋವರ್ಸ್ ಸಂಚಾಲಕರಾದ ಎಸ್. ಕೃಪಾ,  ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಲಿಖಿತ ಎಸ್. ಅನುರಾಧ, ಪತ್ರಾಂಕಿತ ವ್ಯವಸ್ಥಾಪಕರಾದ ಜಿ.ಎನ್. ಸಾಕಮ್ಮ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೆಚ್.ಎಂ. ಅಂಜಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *