- ಆ. 2ರಂದು ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಲಿಖಿತ ಪರೀಕ್ಷೆ
ಚಾಮರಾಜನಗರ: ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ 2 ರಂದು ಜಿಲ್ಲೆಯಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇರ ನೇಮಕಾತಿ ಸಂಬಂಧ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಮಾರ್ಗಾಧಿಕಾರಿಗಳು, ಪ್ರಶ್ನೆಪತ್ರಿಕೆ ಪಾಲಕರು, ಪರೀಕ್ಷಾ ವೀಕ್ಷಕರು, ವಿಶೇಷ ಜಾಗೃತ ದಳದ ಸದಸ್ಯರೊಂದಿಗೆ ನಡೆದ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ 3395 ಮತ್ತು ಸ್ಥಳೀಯ ವೃಂದದ 596 ಸಿವಿಲ್ ಪೆÇಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ 2ರಂದು ಚಾಮರಾಜನಗರ ಪಟ್ಟಣದ 12 ಹಾಗೂ ಕೊಳ್ಳೇಗಾಲ ಪಟ್ಟಣದ 6 ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ನಿರ್ವಹಣೆಗೆ ನಿಯೋಜಿತ ಅಧಿಕಾರಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದರು.
ಪರೀಕ್ಷಾ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ಆಡಳಿತಾತ್ಮಕ ಭದ್ರತೆ ವ್ಯವಸ್ಥೆಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಉಸ್ತುವಾರಿ, ಪರೀಕ್ಷಾ ಮಾರ್ಗಸೂಚಿಗಳು ಹಾಗೂ ಇಲಾಖಾವಾರು ನೀಡಿರುವ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಪರೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ಪಠ್ಯಪುಸ್ತಕ ಸಾಮಗ್ರಿಗಳಾದ ಪೇಪರ್ ಚೀಟಿಗಳು, ಜಾಮಿಟ್ರಿ ಬಾಕ್ಸ್, ಪೆನ್ಸಿಲ್ ಬಾಲ್ಸ್, ಪೆನ್ ಡ್ರೈವ್, ಮೈಕ್ರೋಫೋನ್, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಲುಕುಲೇಟರ್, ವೈಯಕ್ತಿಕ ಸಾಧನಗಳಾದ ವಾಲೆಟ್, ಗಾಗಲ್ಸ್, ಕ್ಯಾಪ್ ಕೈಚೀಲಗಳು, ಬೆಲ್ಟ್, ಮೊಬೈಲ್, ಕೈಗಡಿಯಾರ, ಬ್ಲೂಟೂತ್, ಕ್ಯಾಮೆರಾ, ಇಯರ್ ಫೋನ್, ಪೇಜರ್, ಸಂವಹನಾ ಸಾಧನಗಳು ಹಾಗೂ ನೀರಿನ ಬಾಟಲ್ ಯಾವುದೇ ಬಗೆಯ ಆಹಾರ ಸಾಮಗ್ರಿಗಳನ್ನು ನಿಷೇಧಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳು ತಲೆ, ಮುಖ, ಕಿವಿ ಮುಚ್ಚುವಂತಹ ಯಾವುದೇ ಉಡುಪುಗಳು, ಉದ್ದ ತೋಳಿನ ಶರ್ಟ್ ಧರಿಸಿರಬಾರದು. ಮಹಿಳೆಯರು ಮೂಗುತಿ ಹಾಗೂ ಮಂಗಳ ಸೂತ್ರವನ್ನು ಹೊರತುಪಡಿಸಿ ಇನ್ನಿತರೆ ಯಾವುದೇ ಅಭರಣಗಳ ಧರಿಸುವಿಕೆ ನಿಷಿದ್ಧವಾಗಿದೆ. ಪರೀಕ್ಷಾ ಕೇಂದ್ರಕ್ಕೆ ಹೈಹೀಲ್ಡ್ ಚಪ್ಪಲಿ ಹಾಗೂ ಶೂ ಧರಿಸದೇ ಕಡಿಮೆ ಹಿಮ್ಮಡಿ ಇರುವ ಚಪ್ಪಲಿ ಧರಿಸುವಂತಹ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಧಾರ್ಮಿಕ ಹಾಗೂ ಸಾಂಸ್ಕøತಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಆಗಸ್ಟ್ 2ರಂದು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗಾಗಿ ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗಿದೆ. ಪರೀಕ್ಷಾ ಕಾರ್ಯವು ಸಿ.ಸಿ. ಟಿವಿ ಕಣ್ಗಾವಲಿನಲ್ಲಿ ನಡೆಯಲು ಕ್ರಮಗಳನ್ನು ವಹಿಸಲಾಗಿದೆ. ಪ್ರಶ್ನೆಪತ್ರಿಕೆಗಳ ವಿತರಣೆ, ಸಾಗಣೆ, ಗೌಪ್ಯ ಸಾಮಗ್ರಿಗಳ ತಪಾಸಣೆ, ಮೂಲಸೌಕರ್ಯ ಕುರಿತು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಂಜುಳ, ತಹಶೀಲ್ದಾರ್ ಗಿರಿಜಾ, ಶಿಕ್ಷಣ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.