ನಕಲಿ ವೈದ್ಯರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರನ್ನು ಪತ್ತೆಹಚ್ಚಿ ಕೆ.ಪಿ.ಎಂ.ಇ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪ್ರಾಧಿಕೃತ ಹಾಗೂ ಜಿಲ್ಲಾ ಮಟ್ಟದ ವಿಶೇಷ ಪಡೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಜು.30) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೆ.ಪಿ.ಎಂ.ಇ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ. ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ಜಿಲ್ಲೆಯಲ್ಲಿ ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್ ತೆರೆದು ಕಾರ್ಯ ನಿರ್ವಹಿಸುತ್ತಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಿಯಮಾನುಸಾರ ನೋಟಿಸ್ ನೀಡಿ ಮುಚ್ಚಿಸಿ, ಸೀಲ್ ಮಾಡಲಾಗಿದ್ದ 6 ಕ್ಲಿನಿಕ್ ಗಳಿಗೆ ಕೆಪಿಎಂಸಿ ಸೆಕ್ಷನ್ 15(1) ಪ್ರಕಾರ 50 ಸಾವಿರ ರೂ. ದಂಡ ವಿಧಿಸಲಾಗಿದ್ದು, 3 ಕ್ಲಿನಿಕ್‍ಗಳು ಮಾತ್ರ ದಂಡ ಪಾವತಿಸಿದೆ. ಉಳಿದ 3 ಕ್ಲಿನಿಕ್ ನಿರ್ವಹಿಸುತ್ತಿದ್ದ ನಕಲಿ ವೈದ್ಯರಿಗೆ ದಂಡ ಪಾವತಿಸಲು ಮತ್ತೊಂದು ನೋಟಿಸ್ ನೀಡಬೇಕು. ದಂಡ ಪಾವತಿಸದೇ ಇದ್ದಲ್ಲಿ ನಕಲಿ ವೈದ್ಯರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

  ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರದ ಹೆಚ್ಚಳದ ಬಗ್ಗೆ ಮೌಖಿಕವಾಗಿ ಹಲವು ದೂರುಗಳು ಬಂದಿದ್ದು, ಈ ಕುರಿತು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಪಿ.ಸಿ.ಪಿ.ಎನ್.ಡಿ.ಟಿ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಯಾವುದೇ ನಿಯಮಬಾಹಿರ ಚಟುವಟಿಕೆಗಳಿಗೆ ಅವಕಾಶ ದೊರಕದಂತೆ ಎಚ್ಚರ ವಹಿಸಬೇಕು. ತಪಸಣಾ ಹಾಗೂ ಪರಿಶೀಲನಾ ತಂಡವು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು. 

  ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯಡಿಯಲ್ಲಿ ನೋಂದಣಿಯಾಗದೆ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಸ್ಕ್ಯಾನಿಂಗ್ ಸೆಂಟರ್ ಗಳು ಕಾರ್ಯನಿರ್ವಹಿಸದಂತೆ ಎಚ್ಚರಿಕೆ ವಹಿಸಬೇಕು. ಅನಧಿಕೃತ ಸ್ಕ್ಯಾನಿಂಗ್ ಸೆಂಟರ್‍ಗಳು ಕಂಡುಬಂದರೆ ನಿಯಮಾನುಸಾರ ಕಾನೂನು ಕ್ರಮವಹಿಸಲು ಪಿ.ಸಿ.ಪಿ.ಎನ್.ಡಿ.ಟಿ. ಸಕ್ಷಮ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.

   ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ, ಶ್ರೀನಿವಾಸ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *