ಚಿರತೆ ದಾಳಿ: ನಾಲ್ಕು ಮೇಕೆಗಳು ಬಲಿ – ಸೂಕ್ತ ಪರಿಹಾರ, ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ

ಹನೂರು: ತಾಲೂಕಿನ ಕುರುಬ ದೊಡ್ಡಿ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಚಿರತೆ ದಾಳಿ ನಡೆಸಿದ ಪರಿಣಾಮ ರೈತ ಮಹಿಳೆಗೆ ಸೇರಿದ ನಾಲ್ಕು ಮೇಕೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಬಸಪ್ಪನ ದೊಡ್ಡಿ ಗ್ರಾಮದ ಶಿವಮ್ಮ (ಕೋಂ ಚೆನ್ನೇಗೌಡ) ಎಂಬುವರಿಗೆ ಸೇರಿದ ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆ, ಅವುಗಳನ್ನು ಕೊಂದು ಹಾಕಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿ (ಡಿ.ಆರ್.ಎಫ್.ಒ) ನಂದೀಶ್ ಹಾಗೂ ಪಶುವೈದ್ಯಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯಾದರ್ಶಿ ಅಮ್ಜದ್ ಖಾನ್, “ಗ್ರಾಮೀಣ ಭಾಗದ ರೈತರು ಸಾಲ-ಸೋಲ ಮಾಡಿ ಜಾನುವಾರು ಮತ್ತು ಮೇಕೆಗಳನ್ನು ಸಾಕಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಕಾಡುಪ್ರಾಣಿಗಳ ದಾಳಿಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಹೊಲ-ಗದ್ದೆಗಳಿಗೆ ತೆರಳಲು ಮತ್ತು ರಾತ್ರಿ ವೇಳೆ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯು ಕೇವಲ ಸಾಂತ್ವನ ಹೇಳದೆ, ರೈತರ ರಕ್ಷಣೆಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ದಾಳಿಯಿಂದ ಜೀವನೋಪಾಯ ಕಳೆದುಕೊಂಡು ಕಂಗಾಲಾಗಿರುವ ಬಡ ರೈತ ಮಹಿಳೆಗೆ ಅರಣ್ಯ ಇಲಾಖೆಯು ವಿಳಂಬ ಮಾಡದೆ ತಕ್ಷಣವೇ ಸೂಕ್ತ ನಷ್ಟಪರಿಹಾರ ಒದಗಿಸಬೇಕು ಹಾಗೂ ಗ್ರಾಮಸ್ಥರ ಮತ್ತು ಜಾನುವಾರುಗಳ ಭದ್ರತೆಯ ದೃಷ್ಟಿಯಿಂದ ಕೂಡಲೇ ಚಿರತೆ ಸೆರೆಗೆ ಬೋನ್ ಅಳವಡಿಸಿ, ನಿರಂತರ ಗಸ್ತು ತಿರುಗುವ ಮೂಲಕ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *