ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖಾ ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಏರ್ಪಡಿಸಿರುವ ರೈತ ದಸರಾ ಅಂಗವಾಗಿ ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಅಕ್ಟೋಬರ್ 15 ಮತ್ತು 16ರಂದು ಹಾಗೂ ಶ್ವಾನ ಪ್ರದರ್ಶನ ಸ್ಪರ್ಧೆಯನ್ನು ಅಕ್ಟೋಬರ್ 16ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಸಂಯುಕ್ತ ಪದವಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 15ರಂದು ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಸಂಜೆ 5 ಗಂಟೆಯೊಳಗೆ ಕಾಲೇಜು ಆವರಣ ಪ್ರವೇಶಿಸಿ ಕೆಚ್ಚಲು ಬರಿದುಗೊಳಿಸುವ ಪ್ರಕ್ರಿಯೆ ಪೂರೈಸಬೇಕು. 16ರಂದು ಬೆಳಿಗ್ಗೆ 7 ಗಂಟೆಗೆ ದಿನದ ಮೊದಲ ಬಾರಿಗೆ ಹಾಲು ಕರೆಯುವಿಕೆ ಹಾಗೂ ಅದೇ ದಿನ ಸಂಜೆ 5 ಗಂಟೆಗೆ ಎರಡನೇ ಬಾರಿ ಹಾಲು ಕರೆಯುವಿಕೆಯ ಒಟ್ಟು ಪ್ರಮಾಣವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು.
ವಿಜೇತರಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುವುದು.
ಅಕ್ಟೋಬರ್ 16ರಂದು ಶ್ವಾನ ಪ್ರದರ್ಶನ ಸ್ಪರ್ಧೆಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ವಿಜೇತರಾದ ಶ್ವಾನಗಳಿಗೆ ತಳಿವಾರು ವಿಶೇಷ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಚಾಮರಾಜನಗರದ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಮೊ.ಸಂ 9141328463 ಹಾಗೂ ಮುಖ್ಯ ಪಶುವೈದ್ಯಾಧಿಕಾರಿಗಳು ಜಿಲ್ಲಾ ಪಾಲಿಕ್ಲಿನಿಕ್ ಮೊ.ಸಂ 9480310464 ಮತ್ತು ಸ್ಥಳೀಯ ಪಶುವೈದ್ಯ ಸಂಸ್ಥೆಗಳನ್ನು ಸಂಪರ್ಕಿಸಬಹುದು.
ಜಿಲ್ಲೆಯ ಆಸಕ್ತ ಪಶುಪಾಲಕರು ಮತ್ತು ಶ್ವಾನ ಪಾಲಕರು/ಶ್ವಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
Related