- ಹಾಸನ ಜಿಲ್ಲೆಯುದ್ದಕ್ಕೂ ಸಚಿವರ ಬಿರುಸಿನ ಸ್ಥಳ ಪರಿಶೀಲನೆ, ರೈತರ ಜಟಿಲ ಸಮಸ್ಯೆಗೆ ಸ್ಥಳದಲ್ಲೇ ಮುಕ್ತಿ
ಹಾಸನ/ ಅರಸೀಕೆರ/ ಸಕಲೇಶಪುರ : ಬಯಲುಸೀಮೆ ಜಿಲ್ಲೆಗಳ ಜನರ ದಶಕಗಳ ಕನಸಾಗಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಜನರಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರು ಗುರುವಾರ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿರುಸಿನ ಸ್ಥಳ ಪರಿಶೀಲನೆ ನಡೆಸಿದರು.
ಒಟ್ಟು 24.01 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಸಿ, ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಹಾಗೂ ಮುಂದಿನ ಒಂದೂವರೆ ವರ್ಷದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸಲೇಬೇಕೆಂಬ ಕಟ್ಟುನಿಟ್ಟಿನ ಗುರಿಯೊಂದಿಗೆ ಸಚಿವರು ಇಡೀ ದಿನ ಕಾಲುವೆ, ಪಂಪ್‌ಹೌಸ್ ಹಾಗೂ ವಿತರಣಾ ತೊಟ್ಟಿಗಳ ಕಾಮಗಾರಿಗಳನ್ನು ಅಖಾಡಕ್ಕಿಳಿದು ವೀಕ್ಷಿಸಿದರು.
ಯೋಜನೆಯ ಕಾಮಗಾರಿ ನಡೆಯುತ್ತಿರುವ ತುಮಕೂರಿನ ಸ್ಥಳ ಪರಿಶೀಲನೆ ಬಳಿಕ
ಅರಸೀಕೆರೆ ತಾಲೂಕಿನ ತೊಳಲುತೊರೆಯ ಪ್ಯಾಕೇಜ್-8 ಗುರುತ್ವ ಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಮೈನಿಂಗ್ ಹಾಗೂ ಲೈನಿಂಗ್ ಕೆಲಸಗಳಲ್ಲಿ ವಿಳಂಬ ಧೋರಣೆ ತೋರುತ್ತಿದ್ದ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಕಡೆಯಿಂದ ಆರ್ಥಿಕ ನೆರವು ಸೇರಿದಂತೆ ಎಲ್ಲಾ ಅಗತ್ಯ ಸಹಕಾರ ಸಿಗುತ್ತಿರುವಾಗ ಕೆಲಸದಲ್ಲಿ ಕಾಲಹರಣ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಸಮರೋಪಾದಿಯಲ್ಲಿ ಕೆಲಸ ಮುಗಿಸಿ ಟ್ರಯಲ್ ರನ್ ಸಿದ್ಧತೆ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಇದೇ ವೇಳೆ ಸ್ಥಳೀಯ ರಂಗನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿ, ಹೇಮಾವತಿ ಲಿಂಕ್ ಮೂಲಕ ಅರಸೀಕೆರೆ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಶೀಘ್ರ ಅನುಮೋದನೆ ಕೊಡಿಸುವ ಭರವಸೆಯನ್ನೂ ಸ್ಥಳೀಯರಿಗೆ ನೀಡಿದರು.
ಮುಂದುವರಿದು ನಾಯ್ಕನಕೆರೆ ಕಾವಲ್‌ನ ಪ್ಯಾಕೇಜ್-6 ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸೇರಿಯ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಸ್ಥಳಕ್ಕೆ ತೆರಳಿದ ಸಚಿವರು, ರೈತರೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆ ಬಗೆಹರಿಸಿದರು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೊಸ ಜಿಒ ಹೊರಡಿಸಲಾಗಿದ್ದು, ಎರಡು-ಮೂರು ದಿನಗಳಲ್ಲಿ ಪರಿಹಾರ ವಿತರಣೆಯಾಗಲಿದೆ ಎಂದು ರೈತರಿಗೆ ಅಭಯ ನೀಡಿ, ಯೋಜನೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮುನ್ನಡೆಸಲು ಕೈಮುಗಿದು ಸಹಕಾರ ಕೋರಿದರು.
ಮಧ್ಯಾಹ್ನದ ವೇಳೆಗೆ ಬೇಲೂರಿನ ಐದಳ್ಳಕಾವಲ್ ವ್ಯಾಪ್ತಿಯ ಪ್ಯಾಕೇಜ್ 4, 5 ಮತ್ತು 6ರ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವರು, ನವೆಂಬರ್ ಒಳಗೆ ಲೆವೆಲ್ ರೀಚ್ ಮತ್ತು ಕಟ್ & ಕವರ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ಗಳಿಗೆ ಖಡಕ್ ಗಡುವು ವಿಧಿಸಿದರು. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆ ತಕರಾರಿನಿಂದ ನನೆಗುದಿಗೆ ಬಿದ್ದಿದ್ದ 103 ರೈತರ ಜಮೀನಿನ ಸಮಸ್ಯೆಯನ್ನು ಎರಡು ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿ ಸಚಿವರು ಇತ್ಯರ್ಥಪಡಿಸಿದರು.
ತಜ್ಞರ ಸಮಿತಿ ರಚನೆ
ತಜ್ಞರ ಸಮಿತಿ ರಚಿಸಿ ದಾಖಲೆ ಪರಿಶೀಲನೆ ಆಧಾರದಲ್ಲಿ ಅರ್ಹ ರೈತರಿಗೆ ಎಕರೆಗೆ 16 ಲಕ್ಷ ರೂ. ಪರಿಹಾರ ನೀಡುವ ಜತೆಗೆ, ಮಾನವೀಯ ನೆಲೆಗಟ್ಟಿನಲ್ಲಿ ಯಾವುದೇ ತಾಂತ್ರಿಕ ಅಡೆತಡೆಗಳಿಲ್ಲದೆ ಪ್ರತಿ ಎಕರೆಗೆ 2.50 ಲಕ್ಷ ರೂ. ದಯಾತ್ಮಕ ಪರಿಹಾರವನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರು.
ದಿನದ ಅಂತ್ಯದಲ್ಲಿ ಸಕಲೇಶಪುರದ ದೊಡ್ಡನಾಗರದ ಹಂತ-10ರ ವಿತರಣಾ ತೊಟ್ಟಿ 3 ಮತ್ತು 4 ಹಾಗೂ ದೋಣಿಗಲ್ ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿದ ಸಚಿವರು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಂಪ್ ಮೂಲಕ 17 ಕೆರೆಗಳಿಗೆ ನೀರುಣಿಸುತ್ತಿರುವ ಪ್ರಗತಿಯನ್ನು ಪರಿಶೀಲಿಸಿದರು.
ಈ ವರ್ಷ ಮಾರ್ಚ್‌ನಿಂದ ಎತ್ತಲಾಗಿರುವ 1.5 ಟಿಎಂಸಿ ನೀರಿನ ಸಮರ್ಪಕ ಹರಿವು, ಗುರುತ್ವಾಕರ್ಷಣಾ ಕಾಲುವೆಯ ಸಾಮರ್ಥ್ಯದ ವಿವರಗಳನ್ನು ಅಧಿಕಾರಿಗಳಿಂದ ಪಡೆದ ಅವರು, ಇಲಾಖೆಗೆ ಸಬೂಬುಗಳು ಬೇಡ, ಫಲಿತಾಂಶ ಮಾತ್ರ ಮುಖ್ಯ ಎಂದು ತಾಕೀತು ಮಾಡಿದರು.
ಯಾವುದೇ ಸಣ್ಣ ಅಡೆತಡೆಗಳಿಗೂ ಯೋಜನೆ ನಿಲ್ಲದಂತೆ ಸಚಿವರು ಸ್ಥಳದಲ್ಲೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಎತ್ತಿನಹೊಳೆ ಕಾಮಗಾರಿಗೆ ಅಭೂತಪೂರ್ವ ವೇಗ ತಂದುಕೊಟ್ಟಿದ್ದಾರೆ.
ಈ ವೇಳೆ ಸಚಿವ ಶಿವಲಿಂಗೇಗೌಡ, ಶಾಸಕ ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಇತರರಿದ್ದರು.
