- ಸದುಪಯೋಗ ಪಡಿಸಿಕೊಳ್ಳಲು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಸಂದೀಪ್ ಪಾಟೀಲ್ ಸಲಹೆ


ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ‘ಪಿಎಂ ಶ್ರೀ’ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಸುಮಾರು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯ ಕಟ್ಟಡವನ್ನು ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಸಂದೀಪ್ ಪಾಟೀಲ್, ಗ್ರಾಮೀಣ ಭಾಗದ ಮಕ್ಕಳಿಗೆ ಬಾಲ್ಯದಲ್ಲೇ ನೈರ್ಮಲ್ಯ ಹಾಗೂ ಶೌಚಾಲಯ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ. ಇದು ಮಕ್ಕಳನ್ನು ಅನಾರೋಗ್ಯದಿಂದ ದೂರವಿಡಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಶೌಚಾಲಯವನ್ನು ಮುಂದಿನ ದಿನಗಳಲ್ಲಿ ನೈರ್ಮಲ್ಯದಿಂದ ಕಾಪಾಡಿಕೊಳ್ಳುವುದು ಶಾಲಾ ಶಿಕ್ಷಕರ ಮುಖ್ಯ.ಜವಾಬ್ದಾರಿಯಾಗಿದೆ,ಎಂದರು.
ತಮ್ಮ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ಕುರಿತು ಮಾತನಾಡುತ್ತಾ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಹಾಗೂ ಪಾಠೋಪಕರಣಗಳನ್ನು ನಮ್ಮ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತಿದೆ.
ಗ್ರಾಮಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು,ಎಂದು ಕರೆ ನೀಡಿದರು.
ಇದೇ ವೇಳೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ ಮಾತನಾಡಿ, ನಮ್ಮ ಗ್ರಾಮದ ಶಾಲೆಗೆ ಮಣಿಪಾಲ್ ಆಸ್ಪತ್ರೆಯವರು ಉಚಿತವಾಗಿ ಶೌಚಾಲಯ ನಿರ್ಮಿಸಿಕೊಟ್ಟಿರುವುದು ಶಾಲಾ ಮಕ್ಕಳ ಸುಯೋಗ. ಸರ್ಕಾರದಿಂದ ಆಗದ ಕೆಲಸವನ್ನು ಈ ಸಂಸ್ಥೆ ಮಾಡಿ ತೋರಿಸಿದೆ. ಈ ಸಮಾಜಮುಖಿ ಕಾರ್ಯಕ್ಕಾಗಿ ಗ್ರಾಮಸ್ಥರ ಪರವಾಗಿ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ,ಎಂದು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧಿಕಾರಿಗಳಾದ ಮಂಜು, ಚೇತನ್, ನವೀನ್, ಶಾಲೆಯ ಮುಖ್ಯ ಶಿಕ್ಷಕಿ ಮೇರಿ, ಎಸ್‌ಡಿಎಮ್‌ಸಿ ಅಧ್ಯಕ್ಷ ರಾಜೇಶ್, ವರ್ತಕರ ಸಂಘದ ಅಧ್ಯಕ್ಷ ಮಹೇಶ್,ಗ್ರಾ. ಪಂ.ಕಾರ್ಯದರ್ಶಿ ಶಿವಕುಮಾರ್, ಗ್ರಾಮ ಲೆಕ್ಕಧಿಕಾರಿ ವಿನೋದ್,ಜಜ್ಜೆಗೌಡ, ಕಾಳೆಗೌಡ, ಮಹದೇವ್, ಬೋಳ್ ಮಾದೇಗೌಡ, ಮಹೇಂದ್ರ, ಪ್ರತಾಪ್, ರವೀಶ್,ಜಯಣ್ಣ, ಸೇರಿದಂತೆ ಶಾಲೆಯ ಸಹ ಶಿಕ್ಷಕರು, ಗ್ರಾಮದ ಹಿರಿಯರು, ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
