ಗಮಕ ಕಲೆಯ ಸಂರಕ್ಷಣೆ, ಪ್ರೋತ್ಸಾಹ ತುಂಬಾ ಅಗತ್ಯ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಕರ್ನಾಟಕದ ಪ್ರಾಚೀನ ಕಲೆ ಗಮಕ ಕಲೆಯ ಸಂರಕ್ಷಣೆ, ಪ್ರಚಾರ, ಪ್ರೋತ್ಸಾಹ ತುಂಬಾ ಅಗತ್ಯವಾಗಿದೆ. ಕನ್ನಡದ ವಿಶೇಷ ಕಲೆ ಗಮಕ ಕಲೆಯನ್ನು ಯುವಕರು ಮತ್ತು ವಿದ್ಯಾರ್ಥಿಗಳು ಮತ್ತು ವಯಸ್ಸಿನ ಭೇದವಿಲ್ಲದೆ ಕಲಿಯುವ ಮೂಲಕ ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡೋಣ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು, ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಚಾಮರಾಜನಗರದ ವತಿಯಿಂದ ನಡೆದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸಂಸ್ಥಾಪನಾ ದಿನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಕ್ಟೋಬರ್ 2 1982 ರಲ್ಲಿ ಕರ್ನಾಟಕ ಗಮಕಲಾಪರಿಷತ್ತು ಅಸ್ತಿತ್ವಕ್ಕೆ ಬಂದಿದೆ. ಇಡೀ ರಾಜ್ಯದ ಎಲ್ಲಾ ಕಡೆ ಗಮಕ ಕಲೆ, ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಜಾಗೃತಿಯ ಅಭಿಯಾನ, ಕಾವ್ಯವಾಚನ, ಕಾರ್ಯಗಾರ, ಯುವ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಮಕಲೆ ತರಬೇತಿ, ಸಾಹಿತ್ಯ ಪ್ರಕಟಣೆ, ಕಮ್ಮಟ, ಸಮ್ಮೇಳನ, ಸ್ಪರ್ಧೆ ಮತ್ತು ಗಮಕ ಪರೀಕ್ಷೆ ಮೂಲಕ ಕಲೆಯನ್ನು ಬೆಳೆಸುವ ಕಾರ್ಯವನ್ನು ನಿರ್ವಹಿಸುತ್ತದೆ. ಚಾಮರಾಜನಗರ ಜಿಲ್ಲೆ, ಗಮಕಲೆಯ ತವರೂರಾಗಿತ್ತು. ಆದರೆ ಇಂದು ಪ್ರೋತ್ಸಾಹದ ಕೊರತೆಯಿಂದ ಗಮಕಕಲೆ ಸೊರಗುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಮುಖ ಕಲೆಯನ್ನು ಉಳಿಸುವ ದೃಷ್ಟಿಯಲ್ಲಿ ಪೋಷಕರು ತಮ್ಮ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪ್ರೋತ್ಸಾಹಿಸಿ ಕಲಿಯುವ ಅಭ್ಯಾಸವನ್ನು ಮಾಡುವ ಮೂಲಕ ಕನ್ನಡದ ಸಾಹಿತ್ಯ, ಸಂಸ್ಕೃತಿ,ಪರಂಪರೆ ಹಾಗೂ ಅಮೂಲ್ಯವಾದ ನಮ್ಮ ಕಲೆಯನ್ನು ಕಲಿಯುವ ಪ್ರಯತ್ನ ಮಾಡೋಣ ಎಂದು ತಿಳಿಸಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸದಸ್ಯರಾಗಲು ಮನವಿ ಮಾಡಿದರು.

ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಗಮಕ ಕಲೆ ಚಾಮರಾಜನಗರದ ರಾಮಸಮುದ್ರ, ಹರದನಹಳ್ಳಿ, ಗುಂಡ್ಲುಪೇಟೆ, ಕೊಳ್ಳೆಗಾಲಗಳಲ್ಲಿ ವ್ಯಾಪಕವಾಗಿ ಇತ್ತು, ಮೈಸೂರು ಸಂಸ್ಥಾನದ ಮಹಾರಾಜರ ಪ್ರೋತ್ಸಾಹ ಈ ಕಲೆಗೆ ಅಪಾರವಾಗಿತ್ತು. ಚಾಮರಾಜನಗರದ ರಾಮದಾಸ್, ರಾಜಗೋಪಾಲ್, ನಾಗೇಶ್ ರಾವ್, ಸುಬ್ರಹ್ಮಣ್ಯಂ ತಿಪಟೂರು ರಾಮಸ್ವಾಮಿ ಮುಂತಾದ ಶ್ರೇಷ್ಠ ಗಮಕಿಗಳು ತಮ್ಮ ಗಮಕದ ಮೂಲಕ ನಾಡಿನ ಎಲ್ಲಡೆ ಪ್ರಸಿದ್ಧರಾಗಿದ್ದರು. ಕಳೆದ ದಶಕಗಳಿಂದ ಗಮಕದ ಕಲೆಯ ಬಗ್ಗೆ ಪ್ರಚಾರವಿರಲಿಲ್ಲ. ಕರ್ನಾಟಕ ಗಮಕಲಾಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಉತ್ತಮ ಸಂಘಟಕರು, ಚಿಂತಕರು,ಉಪನ್ಯಾಸಕರರಾದ ಸುರೇಶ್ ಋಗ್ವೇದಿ ಯವರು ನೇಮಕವಾಗಿರುವುದು ಬಹಳ ಸಂತೋಷವಾದದ್ದು. ಗಮಕಲೆಯನ್ನು ಸಂಘಟಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ಸರ್ವರು ಸಹಕಾರ ನೀಡೋಣ. ಗಮಕ ಕಲೆ ಮತ್ತೆ ಜಿಲ್ಲೆಯಲ್ಲಿ ಹೆಚ್ಚಾಗಲಿ. ಪ್ರತಿಭೆಗಳಿಗೆ ಅವಕಾಶ ಸಿಗಲಿ. ಕಲಿಯುವವರು ಶ್ರದ್ಧೆಯಿಂದ ಗಮಕಕಲೆಯನ್ನು ಕಲಿಯಬೇಕು. ಆ ಮೂಲಕ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ರಂತಹ ಶ್ರೇಷ್ಠ ಸಾಹಿತ್ಯ ಕಾವ್ಯಗಳು ಮನೆ ಮನೆಯಲ್ಲಿ ಸುಸಂಸ್ಕೃತ ವಾತಾವರಣವನ್ನು ಹೆಚ್ಚಿಸಲಿ ಎಂದು ತಿಳಿಸಿದರು.

ತಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿಕೆ ರವಿಕುಮಾರ್ ಸಂಸ್ಥಾಪನಾ ದಿನಾಚರಣೆಗೆ ಶುಭಕೋರಿ ಜಿಲ್ಲೆಯಲ್ಲಿ ಗಮಕ ಕಲೆ ಹೆಚ್ಚು ಪ್ರಸಾರಗೊಂಡು ಕಲಿಕೆಗೆ ಅವಕಾಶ ಸಿಗಲಿ. ಆಸಕ್ತರು ಗಮಕ ಕಲೆಯನ್ನು ಅಭ್ಯಾಸ ಮಾಡಿ ಶಾಶ್ವತವಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿ ಎಂದು ಶುಭ ಹಾರೈಸಿದರು.

ಗಮಕ ಕಲಾವಿದರಾದ ವೀರಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮಿ ರವರು ಗಮಕ ವಾಚನವನ್ನು ಮಾಡುವ ಮೂಲಕ ಸಭಿಕರಲ್ಲಿ ಸಂತೋಷವನ್ನು ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಗಮಕಿಗಳಾದ ವಾಸಂತಿ ವಸುಪಾಲ್, ಶ್ರೀ ಶಾರದಾ ಭಜನಾ ಮಂಡಳಿಯ ಹರದನಹಳ್ಳಿ ಲತಾ, ಸುನೀತಮ್ಮಾ, ಸರಸ್ವತಿ, ಪದ್ಮ ಪುರುಷೋತ್ತಮ, ಜಗದೀಶನ್, ಶಿವಲಿಂಗಮೂರ್ತಿ, ಬಿ ಕೆ ಆರಾಧ್ಯ, ಜಯರಾಜ್ ಮಹಮದ್ ಗೌಸ್, ನಾರಾಯಣ, ಇದ್ದರು.

Leave a Reply

Your email address will not be published. Required fields are marked *