ಜೆಎಸ್ಎಸ್ ಮಹಾವಿದ್ಯಾಪೀಠದ ಶಿಕ್ಷಣ ಸರ್ವರ ವಿಕಾಸಕ್ಕೆ ದಾರಿಯಾಗಿದೆ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಜೆಎಸ್ಎಸ್ ಮಹಾವಿದ್ಯಾಪೀಠದ ಶಿಕ್ಷಣ, ಆರೋಗ್ಯ,ಅನ್ನ,ದಾಸೋಹದ ಸೇವಾ ಕಾರ್ಯಗಳು ಸರ್ವರ ವಿಕಾಸಕ್ಕೆ ದಾರಿಯಾಗಿದೆ.ಜೆ ಎಸ್ ಎಸ್ ಮಹಾವಿದ್ಯಾಪೀಠ ಕಟ್ಟಿದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಮಾನವೀಯತೆಯ ಶ್ರೇಷ್ಠ ಸಂತರಾಗಿ ಇಡೀ ಜೀವನವನ್ನು ಸಮಾಜಕ್ಕೆ ಅರ್ಪಿಸಿಕೊಂಡ ದಿವ್ಯ ಪುರುಷರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕೊಡುಗೆಗಳು ಮತ್ತು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮದಿನದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೈಸೂರು ಭಾಗದಲ್ಲಿ ಎಪ್ಪತ್ತು ವರ್ಷಗಳ ಹಿಂದೆ ಜೆಎಸ್ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿ ಶಿಕ್ಷಣದ ಕ್ರಾಂತಿಯನ್ನು ಮಾಡಿದವರು. ಗಡಿ ಭಾಗವಾದ ಚಾಮರಾಜನಗರ ಸೇರಿದಂತೆ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಮಳವಳ್ಳಿ, ಮೈಸೂರು, ನಂಜನಗೂಡು, ಗ್ರಾಮೀಣ ಪ್ರದೇಶಗಳು ಹಾಗೂ ಇಂದು ದೇಶವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಶಿಕ್ಷಣ, ಆರೋಗ್ಯ, ಧರ್ಮದ ಸೇವೆಯನ್ನು ನೀಡಿ ಮೈಸೂರು ಪ್ರಾಂತ್ಯದ ಜನರಿಗೆ ವ್ಯಕ್ತಿತ್ವ ರೂಪಿಸಿಕೊಂಡು ಜೀವನವನ್ನು ಶ್ರೇಷ್ಠತ್ವಕ್ಕೆ ತೆಗೆದುಕೊಂಡು ಹೋಗಲು ಜೆಎಸ್ಎಸ್ ಸಂಸ್ಥೆ ಅಪಾರ ಕೊಡುಗೆ ನೀಡಿದೆ. ವಿದ್ಯಾ ಸಂಸ್ಥೆ ಮತ್ತು ವಸತಿ ನಿಲಯಗಳ ಸ್ಥಾಪನೆಗಾಗಿ ತಮ್ಮ ಬಂಗಾರದ ಕರಡಿಕೆಯನ್ನು ಮಾರಿ ಹಣ ನೀಡಿದ ರಾಜೇಂದ್ರ ಮಹಾಸ್ವಾಮಿಗಳವರ ಆ ಸೇವಾ ಕಾರ್ಯ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸೇವಾ ಭಾವನೆಗೆ ಪ್ರೇರಣೆ ನೀಡಿದೆ. ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ 23ನೇ ಪೀಠಾಧಿಪತಿಗಳಾಗಿ, ತಮ್ಮ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳಿಗೆ ಆಗುತ್ತಿದ್ದ ಅನಾನುಕೂಲವನ್ನು ಗಮನಿಸಿ ಜೆಎಸ್ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿ ಶಿಕ್ಷಣ, ಆರೋಗ್ಯ, ಅನ್ನ ದಾಸೋಹ ಜೊತೆಗೆ ಧರ್ಮ, ಸಂಸ್ಕೃತಿ, ಕಲೆ,ಸಾಹಿತ್ಯ, ಸಂಗೀತ,ನೃತ್ಯ,ನಾಟಕ, ಜನಪದ, ರೈತ, ಕ್ರೀಡೆ, ದೇಶಿಯತೆ, ತಂತ್ರಜ್ಞಾನ, ಮಹಿಳಾ ವಿಕಾಸ, ಗುಡಿ ಕೈಗಾರಿಕೆ, ಪರಂಪರೆಗಳ ಉತ್ಸವಗಳನ್ನು ಆರಂಭಿಸಿ ಮೈಸೂರು ಭಾಗಕ್ಕೆ ಹೊಸತನವನ್ನು ಅಭಿವೃದ್ಧಿಯನ್ನು ಪ್ರತಿಯೊಬ್ಬರ ವಿಕಾಸವನ್ನು ರೂಪಿಸಿದ ಮಹಾಸಂಸ್ಥೆ.
ಜಾತಿ ಮತ ಭೇದವಿಲ್ಲದೆ ಸರ್ವರಿಗೂ ಮಹಾ ಪೀಠ ವಾಗಿರುವ ಜೆಎಸ್ಎಸ್ ಸಂಸ್ಥೆ ಯಲ್ಲಿ ಅಧ್ಯಯನ ಮಾಡಿದ ನಾವೆಲ್ಲರೂ ಪುಣ್ಯವಂತರಾಗಿದ್ದೇವೆ. ಇಂದು ಸಮಾಜದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಜ್ಜನರಾಗಿ ಬಾಳಲು ಜೆಎಸ್ಎಸ್ ಸಂಸ್ಥೆಯ ಪ್ರಭಾವ ಪ್ರತಿಯೊಬ್ಬರಲ್ಲೂ ಕಾಣಬಹುದಾಗಿದೆ. ಮನೆ ಮನೆಯಲ್ಲೂ ಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಣ ಪಡೆದು ಇಂದು ಸಮಾಜದಲ್ಲಿ ಗೌರವಯುತವಾದ ಸ್ಥಾನ ಪಡೆಯಲು ಜೆಎಸ್ಎಸ್ ಸಂಸ್ಥೆ ತುಂಬಾ ಪ್ರಭಾವ ಬೀರಿದೆ. ಜೆಎಸ್ಎಸ್ ಸಂಸ್ಥೆಗೆ ನಾವೆಲ್ಲರೂ ಸದಾಕಾಲ ಋಣಿ ಯಾಗಿರಬೇಕು ಎಂದು ಋಗ್ವೇದಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ರವರು ಮಾತನಾಡಿ ಪ್ರಥಮ ಬಿಎಸ್ಸಿ ಪದವಿ ಪಡೆದ ತಂಡದಲ್ಲಿ ನಾವು ಕೂಡ ಒಬ್ಬರು. ಜೆಎಸ್ಎಸ್ ಸಂಸ್ಥೆ ಮೈಸೂರು ಪ್ರಾಂತ್ಯದಲ್ಲಿ ಹೆಮ್ಮರವಾಗಿ ಬೆಳೆದು, ಸರ್ವರಿಗೂ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗಡಿ ಭಾಗವಾದ ಚಾಮರಾಜನಗರದಲ್ಲಿ ವಿಶೇಷವಾದ ಅಭಿವೃದ್ಧಿಗೆ ಜೆಎಸ್ಎಸ್ ಸಂಸ್ಥೆ ಕೊಡುಗೆ ನೀಡಿದೆ.ಶಿಕ್ಷಣ, ಆರೋಗ್ಯ ಹಾಗೂ ಧರ್ಮ ಸಂರಕ್ಷಣೆಯಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಜೆಎಸ್ಎಸ್ ಸಂಸ್ಥೆಯ ಕೊಡುಗೆಯ ಬಗ್ಗೆ ಕಾರ್ಯಕ್ರಮ ರೂಪಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹಗಾರ ಎಸ್ ಲಕ್ಷ್ಮಿ ನರಸಿಂಹ ಮಾತನಾಡಿ ಎಂದು ಉಪಕಾರ ಸ್ಮರಣೆ ಮರೆಯಾಗುತ್ತಿದೆ. ಲಕ್ಷಾಂತರ ಜನರ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಜೆಎಸ್ಎಸ್ ಸಂಸ್ಥೆ ಸದಾ ಕಾಲ ಸ್ಮರಣೀಯವಾದದ್ದು. ತಾಲೂಕು ಕನ್ನಡ ಸಾಹಿತ್ಯ ಅರ್ಥಪೂರ್ಣವಾದ ಕಾರ್ಯಕ್ರಮ ರೂಪಿಸಿ, ಶಿಕ್ಷಣ ಪಡೆದು ಇಂದು ತಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿರುವ ಜನರು ಜೆ ಎಸ್ ಎಸ್ ಸಂಸ್ಥೆಗೆ ಸದಾ ಕೃತಜ್ಞತೆಗಳನ್ನು ಅರ್ಪಿಸಲು ಕಾರಣವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್ ಮಾತನಾಡಿ ಮಹಿಳಾ ಶಿಕ್ಷಣಕ್ಕೆ ದಾರಿಯಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಸ್ತುಬದ್ದ ವಾದ ಮಾರ್ಗದರ್ಶನ ನೀಡುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ವೀರಶೆಟ್ಟಿ ಮಾತನಾಡಿದರು ಕಾರ್ಯಕ್ರಮದಲ್ಲಿ ಶಿವಲಿಂಗ ಮೂರ್ತಿ, ನಿವೃತ್ತ ಶಿಕ್ಷಕಿ ಸರಸ್ವತಿ, ಬಿಕೆ ಆರಾಧ್ಯ, ಕುಮಾರ್ ನಾಗೇಶ್, ಮಂಜುನಾಥ್, ಸುರೇಶ್ ದೊಡ್ಡಮೋಳೆ,ಮುರುಗೇಶ್, ಶ್ರೀಮತಿ ಮಂಜುಳಾ ಇದ್ದರು.

Leave a Reply

Your email address will not be published. Required fields are marked *