ಚಾಮರಾಜನಗರದಲ್ಲಿ ಪಿಒಪಿ ಗಣೇಶ ವಿಗ್ರಹ ಮಾರಾಟಗಾರರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ  ಪ್ರತಿಭಟನೆ

ಚಾಮರಾಜನಗರ:  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪಿಒಪಿ ಗಣೇಶ ವಿಗ್ರಹಗಳ ಅಕ್ರಮ ತಯಾರಿಕೆ ಮತ್ತು ಸಾಗಾಟ, ಮಾರಾಟವನ್ನು ಸಂಪೂರ್ಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಣ್ಣಿನ ಗೌರಿಗಣೇಶ ವಿಗ್ರಹ ತಯಾರಕರ ಮತ್ತು ಮಾರಾಟಗಾರರ ಸಂಘ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
     ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಕ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ರಂಗರಾಜ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ,  ಪಿಒಪಿ ಗಣೇಶ ವಿಗ್ರಹ ತಯಾರಿಸುವವರು, ಹೊರಜಿಲ್ಲೆಗಳಿಂದ ತಂದು ಮಾರಾಟ ಮಾಡುವವರು ಹಾಗೂ ಮಾರಾಟಕ್ಕೆ ಸಹಕರಿಸುವವರ ವಿರುದ್ಧ ಕಾನೂನುಬದ್ದವಾಗಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ತುರ್ತು ನಿರ್ದೇಶನ ನೀಡಬೇಕು. ಜಿಲ್ಲಾ ಮಟ್ಟದಲ್ಲಿ 247 ಏಕೀಕೃತ ಸಹಾಯವಾಣಿ ಆರಂಭಿಸಿ, ಸಾರ್ವಜನಿಕರು ಎಲ್ಲಿಂದಲಾದರೂ ಪಿಒಪಿ ವಿಗ್ರಹಗಳ ತಯಾರಿಕೆ, ಸಾಗಾಟ ಹಾಗೂ ಮಾರಾಟದ ಬಗ್ಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು
ದೂರು ಬಂದ ತಕ್ಷಣ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು,. ಪಿಒಪಿ ಹಾಗೂ ಮಣ್ಣಿನ ವಿಗ್ರಹಗಳ ವ್ಯತ್ಯಾಸವನ್ನು ಗುರುತಿಸಲು ಅನುಭವ ಹೊಂದಿರುವ ಮಣ್ಣಿನ
ಗಣೇಶ ಕಲಾವಿದರು, ತಾಂತ್ರಿಕ ತಜ್ಞರು ಹಾಗೂ ಪರಿಸರ ತಜ್ಞರನ್ನು ಒಳಗೊಂಡ ವಿಶೇಷ ಪರಿಶೀಲನಾ ತಂಡಗಳನ್ನು ರಚಿಸಬೇಕು, ಜಿಲೆಯಲ್ಲಿ ಶೀಘ್ರವಾಗಿ ಮಣ್ಣಿನ ಗಣೇಶ ವಿಗ್ರಹ ತಯಾರಕರ ಸಭೆ ನಡೆಸಿ, ನಿಯಮಗಳು, ಕಾನೂನು ಕ್ರಮಗಳು ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಮಗ್ರ ಚರ್ಚೆ ನಡೆಸಿ ಎಲ್ಲರಿಗೂ ಅಗತ್ಯ ಮಾರ್ಗದರ್ಶನ ಹಾಗೂ ಎಚ್ಚರಿಕೆ ನೀಡಬೇಕು,
ಪಿಒಪಿ ವಿಗ್ರಹಗಳ ಆನ್‌ಲೈನ್ ಜಾಹೀರಾತು, ಸಾಮಾಜಿಕ ಜಾಲತಾಣಗಳ ಪ್ರಚಾರ ಹಾಗೂ ಮಾರಾಟದ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಅನುಮತಿ ನೀಡುವಾಗ “ಮಣ್ಣಿನ ಗಣೇಶ ವಿಗ್ರಹ ಮಾತ್ರ ಪ್ರತಿಷ್ಠಾಪಿಸಬೇಕು” ಎಂಬ ಷರತ್ತನ್ನು ಕಡ್ಡಾಯಗೊಳಿಸಬೇಕು.
ಮಣ್ಣಿನ ಗಣಪತಿ ಮತ್ತು ಪೇಪರ್ ಗಣಪತಿಯನ್ನು ಮಾರಾಟ ಮಾಡಲು ಹಾಗೂ ಕೂರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು
  ಪ್ರತಿಭಟನೆಯಲ್ಲಿ  ಮಣ್ಣಿನ ಗೌರಿಗಣೇಶ ವಿಗ್ರಹ ತಯಾರಕರ ಮತ್ತು ಮಾರಾಟಗಾರರ ಸಂಘದ
ಉಪಾಧ್ಯಕ್ಷ  ವಿ.ನಿತ್ಯ, ಪ್ರಧಾನ ಕಾರ್ಯದರ್ಶಿ ಡಿ.ವಿನಯ್ ಕುಮಾರ್, ಸದಸ್ಯರಾದ ಸಿದ್ದಪ್ಪಾಜಿ, ನಟರಾಜು, ಮಂಜುನಾಥ್, ಪುಟ್ಟಸ್ವಾಮಿಶೆಟ್ಟಿ, ಬಸವಣ್ಣ, ಸೋಮಣ್ಣ, ಮಹೇಶ್, ಅವಿನಾಶ್, ರಂಗಸ್ವಾಮಿ, ನಾಗರಾಜು,   ವಿ.ಎಂ.ರವಿಕುಮಾರ್, ಮಮತ, ಗೌರಮ್ಮ, ಆಶಾ, ಬೇಬಿ, ಭಾಗ್ಯ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *