- ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ
ಚಾಮರಾಜನಗರ: ಜಿಲ್ಲೆಯಲ್ಲಿರುವ ಕ್ರೀಡಾ ಸಂಸ್ಥೆಗಳು ನಿಯಮಾನುಸಾರ ನೋಂದಾಯಿಸಿಕೊಳ್ಳಬೇಕು. ಇದರಿಂದ ರಾಜ್ಯ ಕ್ರೀಡಾ ಸಂಸ್ಥೆಗಳಿಂದ ಮಾನ್ಯತೆ ದೊರೆಯುವುದಲ್ಲದೇ ನೆರವಾಗುವ ನಿಟ್ಟಿನಲ್ಲಿ ಎಲ್ಲ ಸಹಕಾರ ಸಿಗಲಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕ್ರೀಡೆಯ ಅಭಿವೃದ್ದಿ ಸಂಬಂಧ ಸಮಾಲೋಚನೆ ಸಭೆ ನಡೆಸಿ ಅವರು ಮಾತನಾಡಿದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರ ಜಿಲ್ಲೆಗಳಿಗೆ ಭೇಟಿ ನೀಡಿ ಕ್ರೀಡಾ ಸೌಲಭ್ಯಗಳನ್ನು ವೀಕ್ಷಿಸಿ ಹಾಗೂ ಕ್ರೀಡಾ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಮುಂದೆ ಕ್ರೀಡಾ ಅಭಿವೃದ್ದಿ ಸಂಬಂಧ ಕೈಗೊಳ್ಳಬೇಕಿರುವ ಕುರಿತು ಸಮಾಲೋಚನೆ ನಡೆಸುತ್ತಿದೆ. ಈಗಾಗಲೇ 22 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಕ್ರೀಡಾ ಅಸೋಸಿಯೇಷನ್‍ಗಳು ಇದ್ದರೆ ಕ್ರೀಡೆ ಸಂಬಂಧ ಚಟುವಟಿಕೆಗಳು ಇನ್ನಷ್ಟು ಉತ್ತಮವಾಗಿ ನಡೆದು ಕ್ರೀಡಾ ಕ್ಷೇತ್ರದ ಪ್ರಗತಿಗೆ ಅನುಕೂಲವಾಗಲಿದೆ. ಹೀಗಾಗಿ ಕ್ರೀಡಾ ಸಂಸ್ಥೆಗಳು ನೋಂದಣಿಯಾಗಬೇಕು ಎಂದರು.
ಕ್ರೀಡೆಯಲ್ಲಿ ಗ್ರಾಮಾಂತರ ಪ್ರದೇಶಗಳಿಗು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ರಾಮಾಂತರ ಭಾಗದ ಪ್ರತಿಭೆಗಳನ್ನು ಗುರುತಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕೆಲಸ ಮಾಡುತ್ತಿದೆ. ಮೊದಲ ಬಾರಿಗೆ ಗುಡ್ಡಗಾಡು ಪ್ರದೇಶದ ಜನರ ಕ್ರೀಡಾಕೂಟಗಳನ್ನು ಆಯೋಜಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ನಿರ್ವಹಣೆ ಮಾಡಬೇಕಿದೆ. ಮೂಲ ಸೌಕರ್ಯಗಳು ಸಹ ಸಮರ್ಪಕವಾಗಿ ಲಭ್ಯವಾದರೆ ಆದಾಯವು ಸಹ ಬರಲಿದೆ. ಜಿಲ್ಲೆಯ ಕ್ರೀಡಾಂಗಣಗಳ ಅಭಿವೃದ್ದಿ, ಕ್ರೀಡಾ ಪಟುಗಳಿಗೆ ಉತ್ತೇಜನ ಸೇರಿದಂತೆ ಕ್ರೀಡಾ ಕ್ಷೇತ್ರದ ಅಭಿವೃದ್ದಿ ಸಂಬಂಧ ಶಾಸಕರೊಂದಿಗೂ ಸಮಾಲೋಚಿಸಲಾಗುವುದು. ಕ್ರೀಡಾ ಸಂಸ್ಥೆಗಳ ಮಾನ್ಯತೆ, ಪ್ರೋತ್ಸಾಹ ಸೇರಿದಂತೆ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಅವಶ್ಯವಿರುವ ಸಹಕಾರ ಕ್ರೀಡಾ ಪ್ರಾಧಿಕಾರದಿಂದ ನೀಡಲಾಗುವುದೆಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಅವರು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಕ್ರೀಡಾ ಸಂಸ್ಥೆಯ ಅಧ್ಯಕ್ಷರು, ಕ್ರೀಡಾ ಪಟುಗಳು, ಸಂಘಟನೆಗಳ ಮುಖಂಡರು ಮಾತನಾಡಿ ಜಿಲ್ಲಾ ಕೇಂದ್ರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಳೆದ 20 ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿದೆ. ಆದರೂ ಪೂರ್ಣವಾಗಿಲ್ಲ. ಕ್ರೀಡಾ ಅಂಕಣಗಳು ನಿರ್ಮಾಣವಾದರೆ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಬಾಲ್ ಬ್ಯಾಡ್ಮಿಂಟನ್, ನೆಟ್ ಬಾಲ್, ಖೋ ಖೋ, ಕಬ್ಬಡ್ಡಿ ಸೇರಿದಂತೆ ಇನ್ನಿತರ ಕ್ರೀಡೆಗಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ಆಸಕ್ತರಿದ್ದಾರೆ. ಇವರಿಗೆ ಕ್ರೀಡಾ ಸೌಲಭ್ಯಗಳು ಲಭ್ಯವಾದರೆ ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಕ್ರೀಡಾ ತರಬೇತುದಾರರನ್ನು ನೇಮಕ ಮಾಡಬೇಕಿದೆ. ಇಲಾಖೆಯ ಪ್ರಶಸ್ತಿಗಳಿಗೂ ಜಿಲ್ಲೆಯ ಸಾಧಕರನ್ನು ಗುರುತಿಸಬೇಕು ಎಂಬುದೂ ಸೇರಿದಂತೆ ಹಲವು ಅಭಿಪ್ರಾಯ ಸಮಸ್ಯೆಗಳನ್ನು ಗಮನಕ್ಕೆ ತಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಹೆಚ್.ಎಸ್. ಬಿಂದ್ಯಾ, ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಸಿದ್ದರಾಜು, ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳಾದ ಶ್ರೀನಿವಾಸ ಪ್ರಸಾದ್, ಚಾ.ರಂ. ಶ್ರೀನಿವಾಸಗೌಡ, ಜಿ. ಬಂಗಾರು, ರಾಜೇಂದ್ರ, ಸಿ.ಎಂ. ನರಸಿಂಹಮೂರ್ತಿ, ನಂಜುಂಡಸ್ವಾಮಿ, ಸುಮನ್, ಚೇತನ್ ದೊರೈರಾಜು, ಮಹದೇವ ಪ್ರಸಾದ್, ಮಂಜುನಾಥ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಗೂ ಮೊದಲು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಹೆಚ್.ಎಸ್. ಬಿಂದ್ಯಾ ಅವರೊಂದಿಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿಂಥೆಟಿಕ್ ಟ್ರ್ಯಾಕ್, ಪೆವಿಲಿಯನ್ ಸೇರಿದಂತೆ ಇತರೆ ಕ್ರೀಡಾ ಸೌಕರ್ಯಗಳನ್ನು ಪರಿಶೀಲಿಸಿದರು.
Like this:
Like Loading...
Related