ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಪ್ರತಿಮೆಯನ್ನು ನಿರ್ಮಿಸುವಂತೆ ಒತ್ತಾಯಿಸಿ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ವೀರವನಿತೆ ಒನಕೆ ಓಬವ್ವ ಅವರು ಕನ್ನಡ ನಾಡಿನ ಶೌರ್ಯ, ಧೈರ್ಯ, ಆತ್ಮಗೌರವ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದಾರೆ. ಚಿತ್ರದುರ್ಗ ಕೋಟೆಯನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಅಪಾರ ಶೌರ್ಯ ಪ್ರದರ್ಶಿಸಿದ ಅವರ ತ್ಯಾಗ ಮತ್ತು ಸಾಹಸ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಜೀವನವು ಇಂದಿನ ಯುವಜನತೆ, ಹೆಣ್ಣುಮಕ್ಕಳುಗಳಿಗೆ ಸ್ಫೂರ್ತಿದಾಯಕ ಆದರ್ಶವಾಗಿದೆ.
ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಭೇಟಿ ನೀಡುತ್ತಾರೆ. ಇಂತಹ ಸಾರ್ವಜನಿಕ ಸ್ಥಳದಲ್ಲಿ ಒನಕೆ ಓಬವ್ವ ಅವರ ಪ್ರತಿಮೆ ಸ್ಥಾಪನೆಯಾದರೆ ಮಹಿಳಾ ಸಬಲೀಕರಣ, ದೇಶಪ್ರೇಮ, ಧೈರ್ಯ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವನ್ನು ಜನರಿಗೆ ಸಾರುತ್ತದೆ. ಜೊತೆಗೆ, ನಮ್ಮ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗುತ್ತದೆ.ಆದ್ದರಿಂದ, ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗ ಸೂಕ್ತ ಸ್ಥಳವನ್ನು ಗುರುತಿಸಿ, ಸರ್ಕಾರದ ನಿಯಮಾನುಸಾರ ವೀರವನಿತೆ ಒನಕೆ ಓಬವ್ವ ಅವರ ಭವ್ಯ ಪ್ರತಿಮೆಯನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿದ್ದರಾಜು ದೊಡ್ಡಿಂದುವಾಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಹಿಂಡಯ್ಯ ಮಾಂಬಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಹನೂರು ನಾಗಣ್ಣ, ಯಳಂದೂರು ತಾಲೂಕು
ಮಹಿಳಾ ಸಂಚಾಲಕಿ ಮೀನಾಕ್ಷಮ್ಮ, ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕ ದೇವರಾಜು ಸಿಂಗನಲ್ಲೂರು ಹಾಜರಿದ್ದರು.
