ಅಂಕಗಳಿಕೆಯೇ ಮುಖ್ಯವಲ್ಲ: ಅತಿಯಾದ ಆಕಾಂಕ್ಷೆ ಬೇಡ

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯೇ ಮುಖ್ಯವಲ್ಲ. ಅಂಕಗಳಿಕೆ ಒಂದು ಪ್ರೇರೇಪಣೆಯಾಗಿದ್ದು, ಅದರಿಂದ ಪ್ರೋತ್ಸಾಹ ಪಡೆದು ಮುಂದಿನ ಸಾಧನೆಯತ್ತ ಮುಖ ಮಾಡಬೇಕು ಎಂದು ನಿವೃತ್ತ ಅಧ್ಯಾಪಕ ಆರ್‍.ಪಿ. ನಿರಂಜನ್ ಸಲಹೆ ನೀಡಿದರು.

ನಗರದ ಮಹಾಮನೆ ಸಭಾಂಗಣದಲ್ಲಿ ಚಾ.ನಗರ ಜಿಲ್ಲಾ ಆರಾಧ್ಯ ಟ್ರಸ್ಟ್‌ ವತಿಯಿಂದ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಅದರೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ನಡೆ ನುಡಿಯನ್ನು ಪಾಲಿಸಬೇಕು. ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ಸಾಧನೆ ಮಾಡಿದರೂ ವ್ಯರ್ಥ ಎಂದರು.
ಯಾವುದೇ ವ್ಯಕ್ತಿಯ ಸಾಧನೆ ಅವರೊಬ್ಬರ ಶ್ರಮವಲ್ಲ. ಅದರಲ್ಲಿ ತಂದೆ ತಾಯಿ, ಪೋಷಕರ ಪಾಲೂ ಇದೆ. ಪೋಷಕರು ಮಕ್ಕಳ ಮೇಲೆ ಯಾವುದೇ ಒತ್ತಡ ಹಾಕಬಾರದು. ನೂರಕ್ಕೆ ನೂರು ಅಂಕ ಬರಲೇಬೇಕು ಎಂಬ ಅತಿಯಾದ ಆಕಾಂಕ್ಷೆ, ನಿರೀಕ್ಷೆ ಬೇಡ ಎಂದು ಸಲಹೆ ನೀಡಿದರು.
ಹೆಚ್ಚು ಓದದೇ ಸಾಧನೆ ಮಾಡಿದವರು ಹಲವಾರು ಮಂದಿ ಇದ್ದಾರೆ. ಕನ್ನಡ ಚಿತ್ರರಂಗವನ್ನು ಬೆಳಗಿದ ಡಾ. ರಾಜಕುಮಾರ್ ಓದಿದ್ದು ನಾಲ್ಕನೇ ತರಗತಿ ಮಾತ್ರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಷ್ಟೋ ಮಹನೀಯರು ಹೆಚ್ಚು ಓದದೆಯೂ ಸಮಾಜದಲ್ಲಿ ಉನ್ನತ ಗೌರವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ನಿರಂಜನ್‌ ಹೇಲಿದರು.
ಅಧ್ಯಕ್ಷ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ಅಗರ ಬು. ರಾಮಾರಾಧ್ಯ ಮಾತನಾಡಿ, ಚಾಮರಾಜನಗರ ಆರಾಧ್ಯ ಟ್ರಸ್ಟ್‌ ಇದೀಗ ಆರಂಭಿಕ ಸ್ಥಿತಿಯಲ್ಲಿದ್ದು, ಇದರ ಬೆಳವಣಿಗೆ ಸಮುದಾಯದ ಎಲ್ಲರ ಸಹಕಾರ ಅಗತ್ಯ. ಎಲ್ಲರಲ್ಲೂ ಒಗ್ಗಟ್ಟು ಅಗತ್ಯ. ಯಾವುದೇ ಕಾರ್ಯವನ್ನು ಮಾಡಲು ಹೊರಟಾಗ ಅದಕ್ಕೆ ಬೆಂಬಲಿಸಬೇಕೇ ಹೊರತು, ಅದನ್ನು ಹಿಮ್ಮೆಟ್ಟುವಂತಾಗಬಾರದು. ಎಲ್ಲರೂ ಸೇರಿ ಟ್ರಸ್ಟ್‌ ಬೆಳವಣಿಗೆಗೆ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷ ರುದ್ರಾರಾಧ್ಯ, ಗುಂಡ್ಲುಪೇಟೆ ಸಂಘದ ಪುಟ್ಟಸೋಮಾರಾಧ್ಯ, ಮೈಸೂರು ಸಂಘದ ಅಧ್ಯಕ್ಷ ಸೋಮಶೇಖರಾರಾಧ್ಯ, ವಿಶ್ವಾರಾಧ್ಯ, ಶಿವಶಂಕರಾರಾಧ್ಯ, ಚಂದ್ರಶೇಖರಾರಾಧ್ಯ, ನಿಜಗುಣ ಆರಾಧ್ಯ, ಸಿದ್ದರಾಮಾರಾಧ್ಯ, ಗಣೇಶಾರಾಧ್ಯ, ಗುರುಮಲ್ಲಾರಾಧ್ಯ, ಸೋಮಾರಾಧ್ಯ, ಗಾಯತ್ರಿ ವೇದಿಕೆಯಲ್ಲಿ ಹಾಜರಿದ್ದರು.

ಚಾಮರಾಜನಗರದಲ್ಲಿ ಜಿಲ್ಲಾ ಆರಾಧ್ಯ ಟ್ರಸ್ಟ್‌ ವತಿಯಿಂದ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

Leave a Reply

Your email address will not be published. Required fields are marked *