- ನಗರದಲ್ಲಿ ಟಾರ್ಚ್ ಲೈಟ್ ಮೆರವಣಿಗೆಗೆ ಜಿ.ಪಂ. ಸಿ.ಇ.ಒ ಮೋನಾರೋತ್ ಚಾಲನೆ
- ಎಸ್.ಐ.ಆರ್ ರೂಪದಲ್ಲಿ ವಿಶಿಷ್ಟ ಚಿತ್ತಾರ
ಚಾಮರಾಜನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ವ್ಯಾಪಕ ಜನಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿಂದು ಆಯೋಜಿಸಲಾಗಿದ್ದ ಟಾರ್ಚ್ ಲೈಟ್ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಚಾಲನೆ ನೀಡಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಾಸ್ಥಾನದ ಅವರಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಿಲ್ಲಾಡಳಿತ ಭವನದ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ವಿಶಿಷ್ಟವಾಗಿ ಮೊಬೈಲ್ ಟಾರ್ಚ್ ಲೈಟ್ ಮೂಲಕ ಎಸ್.ಐ.ಆರ್ (SIಖ) ಆಕಾರದಲ್ಲಿ ನಿಂತು ಸಂದೇಶ ಸಾರುವ ಮೂಲಕ ಚಿತ್ತಾರ ಮೂಡಿಸಿ ಗಮನ ಸೆಳೆದರು.
ಇದೇ ವೇಳೆ ಮೆರವಣಿಗೆ(ಜಾಥಾ)ಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮುಕ್ತ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಮತದಾರರ ಪಟ್ಟಿಯ ವಿಶ್ವಾರ್ಹತೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿರುವ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸಲು ಟಾರ್ಚ್ ಲೈಟ್ ಮೂಲಕ ವಿಶಿಷ್ಟವಾಗಿ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಅಕ್ಟೋಬರ್ 01, 2026 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಜೂನ್ 30 ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಮನೆ ಮನೆಗೆ ಪರಿಶೀಲನೆಗಾಗಿ ಭೇಟಿ ನೀಡಲಿದ್ದಾರೆ. ಮತಗಟ್ಟೆಗಳ ಪುನರ್ ವಿಂಗಡಣೆ ಜುಲೈ 29ರೊಳಗೆ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಾಗುತ್ತದೆ. ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಹಕ್ಕು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ಚಾಮರಾಜೆಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಜಿಲ್ಲಾಡಳಿತ ಭವನದಲ್ಲಿ ಅಂತ್ಯಗೊಂಡ ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ದಿನಾಂಕ 01-10-2026ಕ್ಕೆ ಹೊಸದಾಗಿ 18 ವರ್ಷತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವುದೇ ಟಾರ್ಚ್ ಲೈಟ್ ಮೆರವಣಿಗೆಯ ಪ್ರಮುಖ ಉದ್ದೇಶವಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಇದೇ ಸಂದರ್ಭದಲ್ಲಿ ಇದ್ದರು.