ಅಂಗವಿಕಲತೆಯಲ್ಲಿ ವಾಕ್ ಮತ್ತು ಶ್ರವಣದೋಷವು ಒಂದಾಗಿದೆ: ಕೆ.ವಿ. ರಾಜಣ್ಣ

  • ರೋಟರಿ ಭವನದಲ್ಲಿ ಉಚಿತವಾಗಿ ವಾಕ್ ಮತ್ತು ಶ್ರವಣ ದೋಷ ತಪಾಸಣೆ ಶಿಬಿರ

ಚಾಮರಾಜನಗರ, ಆ. 4- ಅಂಗವಿಕಲತೆಯಲ್ಲಿ ವಾಕ್ ಮತ್ತು ಶ್ರವಣ ದೋಷವು ಒಂದಾಗಿದ್ದು, ಇದನ್ನು ಸರಿಪಡಿಸಿಕೊಳ್ಳಲು ವೈದ್ಯರ ಸಲಹೆ ಸೂಚನೆಗಳು ಹಾಗೂ ಪರಿಕರಗಳನ್ನು ಉಪಯೋಗಿಸುವ ಬಗ್ಗೆ ಅರಿವು ಮುಖ್ಯವಾಗಿರುತ್ತದೆ ಎಂದು ರಾಜ್ಯ ಅಂಗವಿಕಲ ಕಲ್ಯಾಣ ಇಲಾಖೆಯ ಮಾಜಿ ಆಯುಕ್ತ ಕೆ.ವಿ. ರಾಜಣ್ಣ ತಿಳಿಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಿಲ್ಕ್ಸಿಟಿ ಹಾಗೂ ಮೈಸೂರಿನ ಸುಶ್ರಾವ್ಯ ವಾಕ್ ಮತ್ತು ಶ್ರವಣ ಕ್ಲಿನಿಕ್ ಸಹಯೋಗದಲ್ಲಿ ನಡೆದ ಉಚಿತ ವಾಕ್ ಮತ್ತು ಶ್ರವಣ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಲ್ಲಿ 21 ಅಂಗವಿಲಕತೆಗಳಿದ್ದು, ಇದರಲ್ಲಿ ವಾಕ್ ಮತ್ತು ಶ್ರವಣ ವಿಭಾಗವು ಸಹ ಒಂದಾಗಿದೆ. ಅಂಗವಿಕಲತೆ ಶಾಪವಲ್ಲ. ನಮ್ಮ ದೇಹದ ಬೆಳೆವಣಿಗೆಯಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸವಾಗಿದೆ. ಇದನ್ನು ನಿರ್ಲಕ್ಷö್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವುದನ್ನು ಎಲ್ಲರು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಅಲ್ಲದೇ ಎಲ್ಲಾ ಇಲಾಖೆಯಲ್ಲಿಯು ಸಹ ಅಂಗವಿಕಲರ ಕಲ್ಯಾಣ ನಿಧಿಗಾಗಿ ಶೇ. 5 ರಷ್ಟು ಮೀಸಲಾಡುತ್ತದೆ. ಇದನ್ನು ವಿನಿಯೋಗಿಸಿ ಅಂಗವಿಕಲತೆಯನ್ನು ಹೋಗಲಾಡಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವುದು ಸಹ ನಮ್ಮ ಹಕ್ಕಾಗಿದೆ. ಹೀಗಾಗಿ ಪ್ರತಿಯೊಬ್ಬರು ಸರ್ಕಾರ ಯೋಜನೆಗಳ ಬಗ್ಗೆ ಜಾಗೃತರಾಗಿ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಂಗವಿಕಲ ಆಯೋಗವನ್ನು ರಚನೆ ಮಾಡಿ, ಆಯುಕ್ತರನ್ನು ಸಹ ನೇಮಕ ಮಾಡಿದೆ. ಈ ಮೂಲಕ ಅಂಗವಿಕಲರ ಕಲ್ಯಾಣ ನಡೆಯುತ್ತಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿಯು ಸಹ ಶೇ. 5 ರಷ್ಟು ಮೀಸಲಾತಿ ಇದೆ. ಇಂಥ ಅವಕಾಶವನ್ನು ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ರೋಟರಿ ಸಿಲ್ಕ್ಸಿಟಿ ಸಂಸ್ಥೆ ಸಮಾಜ ಮುಖಿ ಕಾರ್ಯದಲ್ಲಿ ತಮ್ಮನ್ನು ಸಂಫೂರ್ಣವಾಗಿ ತೊಡಗಿಸಿಕೊಂಡಿದೆ. ಇವರೊಂದಿಗೆ ಮೈಸೂರಿನ ಸುಶ್ರಾವ್ಯ ವಾಕ್ ಮತ್ತು ಶ್ರವಣ ಅಸ್ಪತ್ರೆ ಕೈಜೋಡಿ ಜಿಲ್ಲೆಯ ಜನರಿಗೆ ಉಚಿತವಾಗಿ ತಪಾಸಣೆ ಮಾಡಿ, ಸಾಧನೆ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಕು. ಕಿವುಡು ಹಾಗೂ ಮಾತು ಬಾರದವರು ಇಂಥ ಸಾಧನಗಳನ್ನು ತೆಗೆದುಕೊಂಡು ಹೋಗುವ ಜೊತೆಗೆ ಅದನ್ನು ಬಳಕೆ ಮಾಡುವ ಬಗ್ಗೆ ಅರಿವು ಮೂಡಿಸಿಕೊಳ್ಲಬೇಕು ಎಂದರು.
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಆರ್. ಎಸ್. ಶ್ರೀಧರ್ ಮಾತನಾಡಿ, ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ನುಡಿಯಂತೆ ಮನುಷ್ಯನಿಗೆ ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದು ಬಹಳ ಮುಖ್ಯವಾಗಿದೆ. ಈ ನ್ಯೂನತೆವುಳ್ಳವರಿಗೆ ಉಚಿತವಾಗಿ ಶಿಬಿರವನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಈ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬಳಿಕ ಮೈಸೂರಿನ ಸುಶ್ರಾವ್ಯ ಆಸ್ಪತ್ರೆಯ ವೈದ್ಯರಾದ ಡಾ. ನಿವೇದ್ ಮತ್ತು ತಂಡದವರು 102 ಜನ ವಾಕ್ ಮತ್ತು ಶ್ರವಣ ದೋಷ ವುಳ್ಳವರನ್ನು ತಪಾಸಣೆ ಮಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಲಕರಣೆ ಅವಶ್ಯವಿರುವವರಿಗೆ ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಆರ್. ಎಸ್. ಶ್ರೀಧರ್, ಕಾರ್ಯದರ್ಶಿ ಜಿ. ಸಿ. ಮಣಿಕಂಠಸ್ವಾಮಿ, ರೋಟರಿ ಮಾಜಿ ಅಧ್ಯಕ್ಷ ಆರ್.ಎಂ.ಸ್ವಾಮಿ, ಮಾಜಿ ಸಹಾಯಕ ಗವರ್ನರ್ ಗಿರೀಶ್ ದೊಡ್ಡರಾಯಪೇಟೆ, ಮಾಜಿ ಅಧ್ಯಕ್ಷ ರಾದ ಹೊಸೂರು ಶಮಿತ್‌ಕುಮಾರ್,ಚೈತನ್ಯ ಹೆಗೆಡೆ, ಮಾಣಿಕ್ ಚಂದ್ ಸಿರ್ವಿ, ತಮ್ಮಡಹಳ್ಳಿ ರವಿಶಂಕರ್, ಆರ್.ಎಂ. ವಿಜಯಕುಮಾರ್. ಎಸ್. ಶರತ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *