ಬರ ನಿರ್ವವಣೆಯಲ್ಲಿ ರಾಜ್ಯ ಸರ್ಕಾರ ವಿಫಲ : ಮೂಡ್ನಾಕೂಡು ಪ್ರಕಾಶ್

  • ಹರವೆಯಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಾಮರಾಜನಗರ: ಗೋಶಾಲೆ, ಮೇವಿನ ಕೇಂದ್ರ ತೆರೆಯುವಂತೆ ಮತ್ತು ವಿವಿಧ ಪಿಂಚಣಿಗಳನ್ನು ನೀಡುವಂತೆ ಹಾಗೂ ಕೆರೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಹರವೆ ಬಿಜೆಪಿ ಮಹಾಶಕ್ತಿ ಕೆಂದ್ರ ವತಿಯಿಂದ ತಾಲೂಕಿನ ಹರವೆ ನಾಡಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗಿರಿಜಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಮಾತನಾಡಿ,  ಜಿಲ್ಲೆಯಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಅಯಾಯ ವಿಧಾನಸಭಾ ಕ್ಷೇತ್ರದ ಶಾಸಕರು ಜಿಲ್ಲೆಯಲ್ಲಿ ನಡೆಸುತ್ತಿರುವ ಬರ ಅಧ್ಯಯನ ಒಂದು ನಾಟಕವಾಗಿದೆ. ಸಚಿವರಾದ ಸಿ.ಪುಟ್ಟರಂಗಶೆಟ್ಟರು, ಶಾಸಕರು ಸ್ಥಳೀಯರಾಗಿದ್ದು, ಜಿಲ್ಲೆಯಲ್ಲಿ ಉಂಟಾಗಿರುವ ಬರದ ಬಗ್ಗೆ ಅವರಿಗೆ ಮಾಹಿತಿ ಇದ್ದರೂ ಕೂಡ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರದ ಖಜಾನೆಯಾಗಿದ್ದು, ಬರ ನಿರ್ವಹಿಸಲು ಹಣವಿಲ್ಲದ ಕಾರಣದಿಂದ ಬರ ಅಧ್ಯಯನ ಮಾಡುವುದಾಗಿ ಕಾಲಾಹರಣ ಮಾಡುತ್ತಿದ್ದಾರೆ ಎಂದು ದೂರಿದರು.
  ರಾಜ್ಯದಲ್ಲಿ ತೀವುತರವಾದ ಬರ ಪರಿಸ್ಥಿತಿ ಎದುರಿಸುತ್ತಿರುವ ಹೋಬಳಿಗಳಲ್ಲಿ ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯು ಒಂದಾಗಿದೆ, ಈ ಭಾಗದ ರೈತರು ಕೊಳವೇ ಬಾವಿಗಳನ್ನೇ ನಂಬಿ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಮೂಲ ಕಸುಬನ್ನಾಗಿ ಆಶ್ರಯಿಸಿರುತ್ತಾರೆ. ಈ ಬಾರಿ ಪೂರ್ವ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ವ್ಯವಸಾಯ ಮತ್ತು ಹೈನುಗಾರಿಕೆಯಲ್ಲ ತೀವ್ರ ಹಿನ್ನಡೆ ಉಂಟಾಗಿದೆ. ರೈತರು ಬಿತ್ತಿದ ಬಿತ್ತನೆ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಹಾಳಾಗಿದ್ದು, ವಾಣಿಜ್ಯ ಬೆಳೆಗಳು ಮತ್ತು ಹೈನುಗಾರಿಕೆ ಮೇವಿನ ಬೆಳೆಗಳು ಸಂಪೂರ್ಣ ಮಳೆಯ ಅಭಾವದಿಂದ ಹಾಳಾಗಿದೆ. ಜಾನುವಾರುಗಳ ನಿರ್ವಹಣೆಗೆ ರೈತರು ಮಂಡ್ಯ ಮೈಸೂರಿನಂತಹ ಹೊರ ಜಿಲ್ಲೆಗಳಿಂದ ಮುಸುಕಿನ ಜೋಳದ ಮೇವು ಮತ್ತು ಭತ್ತದ ಹುಲ್ಲು ಗಳನ್ನು ಟನ್ ಗೆ 5000 ರಿಂದ 6000 ವರೆಗೆ ಜೊತೆಗೆ ವಾಹನದ ದುಬಾರಿ ಬಾಡಿಗೆ ಕೊಟ್ಟು ತರುವಂತಾಗಿದೆ. ಜಾನುವಾರುಗಳನ್ನು ಸಾಕಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಇಂತಹ ರೈತರ ನೆರವಿಗೆ ಧಾವಿಸಲು ವಿಫಲವಾಗಿದೆ. ಆದ್ದರಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಒಂದು ಮೇವಿನ ಕೇಂದ್ರ ತೆರೆಯಬೇಕು, ಹಾಗೇ ಗೋಶಾಲೆ ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಂತರ್ಜಲ ಕುಸಿತದ ಪರಿಣಾಮ ನೂರಾರು ಕೊಳವೆ ಬಾವಿಗಳು ಬತ್ತಿಹೋಗಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಲ ಕಾಲಕ್ಕೆ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ನಿರ್ವಹಣೆಯ ವಿಫಲತೆ ಅಂತರ್ಜಲ ಕುಸಿತಕ್ಕೂ ಕಾರಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ರೈತರಿಗೆ ಸಣ್ಣ ಪುಟ್ಟ ಸಹಾಯಕ್ಕೆ ನೆರವಾಗುತ್ತಿದ್ದ ವಿವಿಧ ಪಿಂಚಣಿಯನ್ನು ಪರಿಷ್ಕರಣೆಯ ನೆಪದಲ್ಲಿ
ನಿಲ್ಲಿಸಿರುವ ಪರಿಣಾಮ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಆದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಧಾವಿಸಬೇಕೆಂದು  ಮೂಡ್ನಾಕೂಡು ಪ್ರಕಾಶ್  ಒತ್ತಾಯಿಸಿದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಕೆರೆಹಳ್ಳಿ ಮಹದೇವಸ್ವಾಮಿ ಮಾತನಾಡಿ, ರಾಜ್ಯಸರ್ಕಾರಕ್ಕೆ ರೈತರುಬಡವರ ಬಗ್ಗೆ ಕಾಳಜಿ ಇಲ್ಲ : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರು, ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ. ರಾಜ್ಯ ಸರ್ಕಾರ ರೈತ ಪರ ಯಾವುದೇ ಯೋಜನೆಗಳನ್ನು ಮಾಡಲಿಲ್ಲ. ಈ ಸರ್ಕಾರ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆಗಳಿಗೆ ನಿರಂತರವಾಗಿ ನೀರು ಹರಿಯುತ್ತಿತ್ತು ಹೀಗೇಕೆ ಹರಿಯುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾಡಿದರು.
ಪ್ರತಿಭಟನೆಯಲ್ಲಿ ಹರವೆ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ  ಮಹದೇವ ಪ್ರಸಾದ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್ಮ, ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಗಿರೀಶ್, ಚಿಕ್ಕ ನಾಗಪ್ಪ, ಕೃಷ್ಣ ಶೆಟ್ಟಿ, ನಂಜುಂಡಸ್ವಾಮಿ, ಗ್ರಾಮ ಪಂಚಾಯಿತಿ  ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ಶಕ್ತಿಕೇಂದ್ರ ಅಧ್ಯಕ್ಷರಾದ ಕಲ್ಪುರ ವೃಷಬೆಂದ್ರಸ್ವಾಮಿ, ಭುಜಗನಪುರ ಮಹದೇವಸ್ವಾಮಿ, ಸೊಸೈಟಿ ಅಧ್ಯಕ್ಷ ಮಾದಪ್ಪ, ಡೈರಿ ಮಾಜಿ ಅಧ್ಯಕ್ಷ ಎಂ,ಸಿ,ಮಲ್ಲಣ್ಣ, ನಾಗಭೂಷಣ್, ಹರವೆ ಮಧು, ನಟರಾಜು,ಹಳೆಪುರ ಸುಂದರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಚಳ್ಳಿ ಸ್ವಾಮಿ, ಶಿವಣ್ಣ ನಾಯಕ್, ಹೆಗಡೆ ಮಹದೇವಪ್ಪ, ಎಂ ಸಿ ಪ್ರಕಾಶ್, ಶಿವಕುಮಾರ್, ಮೂಡ್ನಾಕೂಡು ಮಂಜು,ಕುಮಾರ್ ಕೆಂಡ್, ಪರಶಿವಪ್ಪ, ಲಿಂಗಣ್ಣ, ಎಸ್ ಮಂಜು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *