ಚಾಮರಾಜನಗರ: ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ ವೇತನವೂ ದೊರೆಯುತ್ತದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿವಿ ಕುಲಸಚಿವ ಪ್ರೊ. ಕೆ.ಎಂ. ಮಹಾದೇವನ್ ಹೇಳಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು. ಸ್ನಾತಕೋತ್ತರ ಪದವಿ ಪಡೆದ ನಂತರ ಪಿಎಚ್‌ಡಿ ಪದವಿ ಪಡೆಯಲು ಅವಕಾಶವಿದೆ. ಐದು ವರ್ಷಗಳ ಕಾಲ ಇದಕ್ಕಾಗಿ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವೂ ದೊರಕುತ್ತದೆ. ಈ ಶೈಕ್ಷಣಿಕ ವರ್ಷದಿಂದ ಕೋಸ್F ಆರಂಭಿಸಲಾಗಿದ್ದು ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿನಿಯರು ಜನಪದ ಗಾಯನ, ಭಕ್ತಿಗೀತೆ, ದೇಶಭಕ್ತಿ ಗೀತೆ, ವಚನ ಗಾಯನ ಹೀಗೆ ಅನೇಕ ಪಠ್ಯೇತರ ಚಟುವಟಿಕೆಗಳಲ್ಲಿ ಬಹುಮಾನ ಪಡೆದಿದ್ದೀರಿ. ಪಠ್ಯದ ಕಲಿಕೆ ಎಂದರೆ ವಿದ್ಯಾರ್ಥಿಗಳಿಗೆ ಅದೊಂದು ಕಡ್ಡಾಯ ಹಾಗೂ ಕಠಿಣ ಎಂಬ ಭಾವನೆ ಇದೆ. ಆದರೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುತ್ತದೆ. ನೀವು ಆಸಕ್ತಿಪಡುವ, ನಿಮಗೆ ಸಂತಸ ತರುವ ವಿಷಯಗಳನ್ನೇ ಪಠ್ಯದ ವಿಷಯಗಳನ್ನಾಗಿ ತೆಗೆದುಕೊಂಡಾಗ ಉತ್ತಮ ಸಾಧನೆ ಮಾಡಬಹುದು ಎಂದರು.
ಮೈಸೂರಿನಲ್ಲಿ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಇದೆ. ಇಲ್ಲಿ ವಿವಿಧ ಪ್ರಕಾರಗಳ ಕಲೆಯ ವಿಷಯಗಳಿದ್ದು ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೇ ಪದವಿ ಪಡೆಯಬಹುದು. ಅದರಲ್ಲೇ ಉದ್ಯೋಗವನ್ನೂ ಪಡೆಯುವುದು ಎಂದು ಅವರು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲೆ ಎಂದರೆ ಜಾನಪದ ಕಲೆಗಳ ತವರೂರು. ಮಂಟೇಸ್ವಾಮಿ, ಸಿದ್ಧಪ್ಪಾಜಿ, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥಸ್ವಾಮಿ ಇದೇ ನೆಲದವರು. ಆದರೆ ಇಲ್ಲಿ ಜನಪದ ವಿಶ್ವ ವಿದ್ಯಾಲಯ ಇಲ್ಲದಿರುವ ಕೊರತೆಯಿದೆ. ಜಿಲ್ಲೆಯಲ್ಲಿ ಜನಪದ ವಿವಿ ಸ್ಥಾಪಿಸಲು ಜನತೆ ಹೋರಾಟ ನಡೆಸಬೇಕು ಎಂದು ಮಹಾದೇವನ್ ಹೇಳಿದರು.
ಜೆಎಸ್‌ಎಸ್ ಬಿಎಡ್ ಕಾಲೇಜು ಪ್ರಾಂಶುಪಾಲ ಡಾ. ಕೆ.ಸಿ. ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ವ್ಯಾಸಂಗ ಪ್ರಮುಖ ಘಟ್ಟ. ಹೆಣ್ಣು ಮಕ್ಕಳು ಉತ್ತಮ ವ್ಯಾಸಂಗ ಮಾಡಿ, ಉದ್ಯೋಗ ಪಡೆದರೆ ಅದು ಸಮಾಜದ ಮುನ್ನಡೆಗೆ ಕಾರಣವಾಗುತ್ತದೆ. ಕೇವಲ ಪದವಿ ಪಡೆಯುವುದಕ್ಕೆ ಸೀಮತವಾಗದೇ, ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಾಯಕವಾಗುವ ಜ್ಞಾನ, ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಅಂತಾರಾಷ್ಟ್ರೀಯ ಖೋ ಖೋ ಕ್ರೀಡಾಪಟು ಚೈತ್ರಾ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಕ್ರೀಡಾಪಟುಗಳಿಗೆ ವಿಫುಲವಾದ ಉದ್ಯೋಗಾವಕಾಶಗಳಿವೆ. ನಿಮಗೆ ಆಸಕ್ತಿಯಿರುವ ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಪ್ರಸಿದ್ಧಿ ಮತ್ತು ಉದ್ಯೋಗವೂ ಕೊರಕುತ್ತದೆ ಎಂದರು
ಪದವಿಯ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ದತ್ತಿ ಪುರಸ್ಕಾರ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಟಿ ಎಂ ಮರಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ ಮೂರ್ತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಜಮುನಾ, ಗಣಿತ ವಿಭಾಗದ ಮುಖ್ಯಸ್ಥೆ ಅರುಣಾಶ್ರೀ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅನುಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.