- ಸಂತೇಮರಹಳ್ಳಿಯಲ್ಲಿ ಬಾಲಗರ್ಭಿಣಿಯನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ ಕುರಿತ ಅರಿವು ಕಾರ್ಯಕ್ರಮ
ಚಾಮರಾಜನಗರ: ಬಾಲ ಗರ್ಭಿಣಿಯನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರವು ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ತಾಲ್ಲೂಕಿನ ಸಂತೇಮರಹಳ್ಳಿಯ ರೇವಮ್ಮ ಮತ್ತು ಪುಟ್ಟಬಸಪ್ಪ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ , ಚಾಮರಾಜನಗರ, ಮಕ್ಕಳ ರಕ್ಷಣೆ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಹೈನುಗಾರಿಕೆ ಇಲಾಖೆ, ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಮಕ್ಕಳ ಸಹಾಯವಾಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅನುಪಮ ಸೇವಾ ಟ್ರಸ್ಟ್(ರಿ) ಚಾಮರಾಜನಗರ ಸಹಯೋಗದಲ್ಲಿ ಬಾಲ ಗರ್ಭಿಣಿಯರ ತಡೆಗಟ್ಟುವಲ್ಲಿ ಪೋಷಕರ ಪಾತ್ರ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು, ಸರಿಯಾದ ಲೈಂಗಿಕ ಶಿಕ್ಷಣ ನೀಡುವುದು ಮತ್ತು ಅವರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಈ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮನೆ ಮತ್ತು ಶಾಲೆಗಳಲ್ಲಿ ಮಕ್ಕಳ ಚಲನವಲನಗಳ ಬಗ್ಗೆ ನಿಗಾವಹಿಸುವುದರ ಮುಖಾಂತರ ಮುಂದೆ ಮಕ್ಕಳಿಗೆ ಆಗುವ ಅನಾಹುತಗಳ ಬಗ್ಗೆ ಪೋಷಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತ ಮಾತನಾಡಿ, ಹೆಣ್ಣು ಮಕ್ಕಳು ಹಕ್ಕುಗಳ ಬಗ್ಗೆ ತಿಳಿಸುತ್ತಾ ಪೋಷಕರು ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಬೇಕು ಜೊತೆಗೆ ಅವರ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಗಮನ ಕೊಡಬೇಕು.ಏನಾದರೂ ದೇಹದಲ್ಲಿ ಬದಲಾವಣೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ತೋರಿಸಬೇಕು.ಹೀಗೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸನ್ನಕುಮಾರ್ ಮಾತನಾಡಿ, ಮನೆಯೊಳಗೆ ಹಾಗೂ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಹಾಗೂ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪೋಷಕರು ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ಅನುಪಮಾ ಸೇವಾ ಟ್ರಸ್ಟ್, ಸಂಸ್ಥಾಪಕ ಅಧ್ಯಕ್ಷೆ ಡಾ. ಪಿ.ಪ್ರೇಮ ಮಾತನಾಡಿ, ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಹೈನುಗಾರಿಕೆ, ಹೊಲಿಗೆ ,ಕೌಶಲ್ಯ,ತರಬೇತಿ. ಹಾಗೂ ಸಾಹಿತ್ಯದ ಧ್ಯೇಯೋದ್ದೇಶಗಳನ್ನು ಕುರಿತು ಹಲವಾರು ವಿಚಾರಗಳನ್ನು ಹಂಚಿಕೊಂಡರು.
ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದ್ದು, ಹೆಚ್ಚಿನ ರೀತಿಯಲ್ಲಿ ಸಂಬಂಧಿಕರು ಹಾಗೂ ಪೋಷಕರಿಂದಲ್ಲೇ ಹೆಣ್ಣು ಮಕ್ಕಳಿಗೆ ಶೋಷಣೆಯಾಗುತ್ತಿದೆ. ಪೋಷಕರಿಗೆ ಕಾನೂನಿನ ಬಗ್ಗೆ ಅರಿವು ಇರಬೇಕಾಗುತ್ತದೆ ಎಂದರು.
ಸಿಡಿಪಿಒಇಲಾಖೆಯ ಮಹೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪಿ.ಡಾ.ಪ್ರೇಮ , ಗುಂಡ್ಲುಪೇಟೆ ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಯೋಗೇಶ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಬಿ.ಮಂಜುನಾಥ, ಕದಂಬ ನಾ ಅಂಬರೀಶ್, ಹಿರಿಯ ಹೋರಾಟಗಾರ ಕಂದೇಗಾಲ ಶಿವಣ್ಣ, ನಿಸರ್ಗ ನಾಗರಾಜು , ಪ್ರಭಾ ಇತರರು ಹಾಜರಿದ್ದರು.