ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ಅನುದಾನ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ ಒತ್ತಾಯ
ಚಿತ್ರದುರ್ಗ (ಸೆ.24): ಪುಣ್ಯ ಕ್ಷೇತ್ರಗಳ ಧಾರ್ಮಿಕ ಆಚರಣೆಗಳಿಗೆ ಮಾತ್ರವಲ್ಲದೇ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ರಂಗಗಳಲ್ಲೂ ಸೇವೆ, ಸೌಲಭ್ಯ ನೀಡಬಹುದು ಎನ್ನುವುದಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠವೇ ಸಾಕ್ಷಿ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.
ಸಿರಿಗೆರೆಯಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆವರಣದಲ್ಲಿ ಆಯೋಜಿಸಿದ್ದ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠದ ಆಚರಣೆಗಳು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಲಿವೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಕೇವಲ ಮಠದ ಪೀಠಾಧಿಪತಿಗಳಾಗಿರಲಿಲ್ಲ, ಬದಲಾಗಿ ಅವರು ಲಕ್ಷಾಂತರ ಗ್ರಾಮೀಣ ಬಡಮಕ್ಕಳ, ಶೋಷಿತರ ಮತ್ತು ರೈತರ ಪಾಲಿನ ಆಶಾಕಿರಣವಾಗಿದ್ದರು ಎಂದರು.
ಅವರು ಕಟ್ಟಿದ ‘ತರಳಬಾಳು ವಿದ್ಯಾಸಂಸ್ಥೆ’ ಇಂದು ರಾಜ್ಯಾದ್ಯಂತ ಜ್ಞಾನದ ಬೆಳಕನ್ನು ಪಸರಿಸುತ್ತಿದೆ. ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಪ್ರತಿ ವರ್ಷ ಇಲ್ಲಿ ನಡೆಯುವ ‘ತರಳಬಾಳು ಹುಣ್ಣಿಮೆ’ಯನ್ನು ಕೇವಲ ಧಾರ್ಮಿಕ ಆಚರಣೆಯಾಗಿಸದೆ, ಅದನ್ನೊಂದು ರೈತರ, ಶ್ರಮಿಕರ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸುವ, ಪರಿಹರಿಸುವ ‘ಜನತಾ ನ್ಯಾಯಾಲಯ’ವನ್ನಾಗಿ ರೂಪಿಸಿದ ಅವರ ದೂರದೃಷ್ಟಿ ಅಸಾಧಾರಣವಾದದ್ದು ಎಂದು ಶ್ಲಾಘಿಸಿದರು.
ಮಳೆಯ ಅಭಾವವಿದ್ದಾಗ ಕೆರೆ ತುಂಬಿಸುವ ಯೋಜನೆಗಳ ಬಗ್ಗೆ ಧ್ವನಿ ಎತ್ತುವುದರಿಂದ ಹಿಡಿದು, ಅನ್ನದಾತನ ಬದುಕಿಗೆ ಧೈರ್ಯ ತುಂಬುವವರೆಗೆ ಮಠ ಸದಾ ಸರ್ಕಾರದ ಜೊತೆ ನಿಂತಿದೆ ಹಾಗೂ ಮಾರ್ಗದರ್ಶನ ನೀಡಿದೆ. ಈ ಮಾರ್ಗದರ್ಶನ ಸದಾ ಸರ್ಕಾರದೊಂದಿಗೆ ಇರಲಿ ಎಂದು ಆಶಿಸಿದರು.
ಲಿಂಗೈಕ್ಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿಯೇ, ಇಂದಿನ ಜಗದ್ಗುರುಗಳಾದ ಪರಮ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಮೂಲಕ ಮಠದ ಸೇವಾಕಾರ್ಯಗಳನ್ನು ವಿಸ್ತರಿಸಿದ್ದಾರೆ ಎಂದರು.
ಭದ್ರಾ ಮೇಲ್ಡಂಡೆಗೆ ಅನುದಾನ ನೀಡಲಿ
ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾರಂಭದಲ್ಲಿ ಎಸ್.ಎಂ. ಕೃಷ್ಣ ಅವರು 100 ಕೋಟಿಗಳ ಅನುದಾನ ನೀಡಿ, ಸರ್ವೆ ನಡೆಸಿ ಯೋಜನೆಗೆ ಚಾಲನೆ ನೀಡಿದ್ದರು. ಬಳಿಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸೇವೆ ಸಲ್ಲಿಸಿದ್ದು, ನಂತರದಲ್ಲಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೊಡುಗೆಯನ್ನೂ ಮರೆಯುವಂತಿಲ್ಲ. ಸಿರಿಗೆರೆ ಸ್ವಾಮೀಜಿಗಳು ಈ ನೀರಿಗಾಗಿ ಸಲ್ಲಿಸಿರುವ ಮನವಿಗಳಿಗೆ ಲೆಕ್ಕವೇ ಇಲ್ಲ ಎಂದು ಸ್ಮರಿಸಿದರು.
ಕೇಂದ್ರ ಸರ್ಕಾರ ಈ ಯೋಜನೆಗೆ ಘೋಷಿಸಿರುವ 5,300 ಕೋಟಿ ರೂ. ಅನುದಾನ ಈ ಅಕ್ಟೋಬರ್‌ನೊಳಗೆ ಬಿಡುಗಡೆಯಾದರೆ, ಸುತ್ತಲಿನ ನಾಲ್ಕು ಜಿಲ್ಲೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಾವು ಸಹ ಸತತ ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ವೇಳೆ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಡಾ. ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಎಚ್. ಮುನಿಯಪ್ಪ, ರಘುಮೂರ್ತಿ, ಮಾಜಿ ಸಚಿವರಾದ ಜಿ.ಎಂ. ಸಿದ್ದೇಶ್ವರ್, ವಸಂತಪ್ಪ, ಸಿ.ಟಿ. ರವಿ ಹಾಗೂ ಇತರ ಶಾಸಕರು ಉಪಸ್ಥಿತರಿದ್ದರು.
