ಮದ್ಯ, ಮಾದಕ ವಸ್ತುಗಳ ಸೇವನೆ ವಿರುದ್ಧ ಯುವಜನತೆ ಜಾಗೃತರಾಗಿ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಅಮಲು ಭರಿಸುವ ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ದ ಯುವಜನರು ಜಾಗೃತರಾಗಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.

  ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್‍ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮಾಜ ಸುಧಾರಕರಾದ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಯುವಕರು ಈ ದೇಶದ ಆಸ್ತಿ ಹಾಗೂ ಮಾನವ ಸಂಪನ್ಮೂಲವಾಗಿದ್ದು, ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಯುವಶಕ್ತಿ ಅಮಲು ಭರಿಸುವ ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ವ್ಯಸನಮುಕ್ತ ಕುರಿತ ಪ್ರತಿಜ್ಞಾವಿಧಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮದ್ಯ ಹಾಗೂ ಮಾದಕ ಪದಾರ್ಥಗಳ ಸೇವನೆ ಬಗ್ಗೆ ಜಾಗೃತಿ ಹೊಂದಬೇಕಾಗಿದೆ. ಕುತೂಹಲಕ್ಕಾಗಿ ಒಮ್ಮೆ ಸೇವಿಸುವ ಮಾದಕ ವಸ್ತುಗಳು ಚಟವಾಗಿ ಪರಿವರ್ತನೆಯಾಗದಂತೆ ಗಮನ ಹರಿಸಬೇಕಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಯುವಕರು ತಾವು ಜಾಗೃತರಾಗಿ ಇತರರಿಗೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. 

  ಈ ದೇಶಕ್ಕೆ ಕೊಡುಗೆ ನೀಡಬೇಕಾದ ಯುವಶಕ್ತಿಯೇ ಇತ್ತೀಚೆಗೆ ಹೆಚ್ಚಾಗಿ ಮಾದಕ ವ್ಯಸನಕ್ಕೆ ಓಳಗಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಾದಕ ವ್ಯಸನಕ್ಕೆ ಒಳಗಾಗುವವರು ಯುವಕ, ಯುವತಿಯರೇ ಆಗಿರುವುದರಿಂದ ಯುವಕರ ಶೈಕ್ಷಣಿಕ ಮುನ್ನೆಡೆಗೆ ಮಾರಕವಾಗಲಿದೆ. ಮಾನಸಿಕ ಆರೋಗ್ಯ ಹಾಳಾಗುವುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಧಕ್ಕೆಯಾಗಲಿದೆ. ಮಾದಕ ವಸ್ತುಗಳ ಸೇವನೆಗಳ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಸರ್ಕಾರ ನಶಾಮುಕ್ತ ಭಾರತ ಅಭಿಯಾನ ಆರಂಭಿಸಿದೆ. ಜಿಲ್ಲಾಡಳಿತವು ನಶಾಮುಕ್ತ ಜಿಲ್ಲೆಗಾಗಿ ವಿವಿಧ ಇಲಾಖೆಗಳೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಎಸ್. ಮಹದೇವನ್ ಅವರು ಮಾತನಾಡಿ ಇಂದಿನ ಒತ್ತಡದ ಪರಿಸ್ಥಿಯಲ್ಲಿ ಯುವಶಕ್ತಿ ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವುದು ದುರದೃಷ್ಟಕರವಾಗಿದೆ. ಯುವಕರು ಯಾವುದೇ ಕ್ಲಿಷ್ಟ ಸನ್ನಿವೇಶ ಎದುರಾದರೂ ಎದೆಗುಂದದೆ ಅದನ್ನು ತಮ್ಮ ಆಲೋಚನೆಗಳಿಂದ ಪರಿಹರಿಸಿಕೊಳ್ಳುವ ಮೂಲಕ ಮಾದಕ ವ್ಯಸನಿಗಳಾಗಬಾರದು. ಒಂದು ವೇಳೆ ಈಗಾಗಲೇ ಮಾದಕ ವ್ಯಸನಿಗಳಾಗಿದ್ದರೆ ಅದರಿಂದ ಹೊರಬರಲು ದೃಢಸಂಕಲ್ಪ ಮಾಡಬೇಕು ಎಂದರು.

  ಗಾಂಜಾ, ಬೀಡಿ, ಸಿಗರೇಟ್, ಆಲ್ಕೋಹಾಲ್, ಗುಟ್ಕಾದಂತಹ ಮಾದಕ ವಸ್ತುಗಳು ಮನುಷ್ಯನ ದೇಹದ ಕಣಕಣಗಳನ್ನು ತಿಂದುಹಾಕಲಿವೆ. ಈ ನಿಟ್ಟಿನಲ್ಲಿ ಯುವಜನಾಂಗ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕು. ಆಹಾರವು ಸೇರಿದಂತೆ ಯಾವುದೇ ವಸ್ತುಗಳ ಸೇವನೆ ಅತಿಯಾಗದೇ ಮಿತಿಯಾಗಿರಬೇಕು. ಮಿತಿಮೀರಿದರೆ ಅಮೃತವು ಸಹ ವಿಷವಾಗಲಿದೆ.  ಯುವಜನತೆ ತಮ್ಮ ಸುಂದರ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾದಕ ವ್ಯಸನಿಗಳಾಗದೇ ಸಮಾಜದ ಸತ್ಪ್ರಜೆಗಳಾಗಲು ಮುಂದಾಗುವಂತೆ ಕುಲಸಚಿವರಾದ ಎಸ್. ಮಹದೇವನ್ ಅವರು ತಿಳಿಸಿದರು.

  ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರಿಸಿ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಅವರು ಇತ್ತೀಚಿನ ದಿನಗಳಲ್ಲಿ ಮತ್ತು ಭರಿಸುವ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಯುವಕರು ಒಳಗಾಗಿ ವ್ಯಸನಿಗಳಾಗುತ್ತಿದ್ದಾರೆ. ಕ್ಷಣಿಕ ಕುತೂಹಲ, ಮಾನಸಿಕ ಖಿನ್ನತೆ, ಜಿಗುಪ್ಸೆ, ಸುತ್ತಲಿನ ಪರಿಸರ, ಕೌಟುಂಬಿಕ ವಾತಾವರಣದ ಒತ್ತಡ ಯುವಜನತೆಯನ್ನು ಮಾದಕ ವ್ಯಸನಕ್ಕೆ ಪ್ರೇರೇಪಿಸಲಿವೆ ಎಂದರು.  

  ಮಾದಕ ವ್ಯಸನ ನಿಗ್ರಹಕ್ಕೆ ಜಾಗೃತಿಯೊಂದೇ ಮದ್ದಾಗಿದೆ. ಯುವಕರು ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿ ಸಾರ್ವಜನಿಕರಿಗೂ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಆದಿವಾಸಿಗಳು ಮಾದಕ ವ್ಯಸನಿಗಳಾಗುತ್ತಿರುವುದು ಕಂಡುಬಂದಿದೆ. ಇದರ ನಿವಾರಣೆಗಾಗಿ ಸದ್ಯದಲ್ಲೆ ಜಿಲ್ಲೆಯಲ್ಲಿ ವ್ಯಸನಗಳ ಜಾಗೃತಿಗಾಗಿ ರೀಹ್ಯಾಬಿಟೇಷನ್ ಸೆಂಟರ್ ತೆರೆಯಲಾಗುತ್ತಿದೆ. ಆ ಮೂಲಕ ಮಾದಕ ವ್ಯಸನಿಗಳನ್ನು ಕೌನ್ಸಲಿಂಗ್ ಮಾಡಿ ಮಾದಕ ವ್ಯಸನದಿಂದ ಹೊರಬರಲು ನೆರವು ನೀಡಲಾಗುತ್ತದೆ. ಪ್ರತಿಯೊಬ್ಬ ಯುವಕರು ನಶಾಮುಕ್ತ ಭಾರತದ ಉದ್ದೇಶಗಳನ್ನು ಮನಗಂಡರೇ ವ್ಯಸನಿಗಳು ಕಡಿಮೆಯಾಗಲಿದ್ದಾರೆ ಎಂದು ಡಾ. ಚಂದ್ರಶೇಖರ್ ಅವರು ತಿಳಿಸಿದರು.

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಮದ್ಯ ಹಾಗೂ ಮಾದಕ ವ್ಯಸನಗಳ ನಿಯಂತ್ರಣ ಕುರಿತ ಪ್ರತಿಜ್ಞಾವಿಧಿ ಬೋಧಿಸಿ, ಬಳಿಕ ಮಾದಕ ವ್ಯಸನದಿಂದಾಗುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳನ್ನು ಸುದೀರ್ಘವಾಗಿ ವಿವರಿಸಿದರು. 

  ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಚಾಮರಾಜನಗರ ವಿಶ್ವವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ದಿವ್ಯಶ್ರೀ, ಗಣಿತ ವಿಭಾಗದ ಉಪನ್ಯಾಸಕರಾದ ಹಾಜೀರಾ ಬಾನು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *