ಮೇ 28ರಂದು ಬಕ್ರೀದ್ ಆಚರಣೆ ಹಿನ್ನೆಲೆ : ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ

ಚಾಮರಾಜನಗರ: ಇದೇ ತಿಂಗಳ ಮೇ 28ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಹಿನ್ನೆಲೆ ನಗರದಲ್ಲಿಂದು ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ ನಡೆಯಿತು.

  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮೊದಲಿಗೆ ಮುಖಂಡರ ಸಲಹೆ, ಆಭಿಪ್ರಾಯ, ಅನಿಸಿಕೆಗಳನ್ನು ಜಿಲ್ಲಾಧಿಕಾರಿಯವರು ಆಲಿಸಿದರು. 

  ಮುಖಂಡರು ಮಾತನಾಡಿ ಪ್ರತಿವರ್ಷದಂತೆ ಈ ಬಾರಿಯು ಸಹ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸಮಾಜಮುಖಿ ಚಿಂತನೆಗಳ ನೆಲೆಗಟ್ಟಿನಲ್ಲಿ ಹಬ್ಬ, ಜಾತ್ರೆ, ಉತ್ಸವಗಳನ್ನು ಸೌಹಾರ್ದಯುತವಾಗಿ ಆಚರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.  

  ಬಕ್ರೀದ್ ಹಬ್ಬದ ದಿನದಂದು ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಮೆರವಣಿಗೆ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ನಿಯಂತ್ರಿಸಬೇಕು. ಅಲ್ಲದೆ ಸರಕುಗಳನ್ನು ಅನ್‍ಲೋಡ್ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮೆರವಣಿಗೆ ಸೂಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿಕೊಡಬೇಕು. ರಸ್ತೆಗಳು ಸ್ವಚ್ಚತೆಯಿಂದ ಕೂಡಿರಬೇಕು. ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಅವಶ್ಯವಿದ್ದರೆ ಟ್ಯಾಂಕರ್‍ಗಳ ಮೂಲಕ ನೀರು ಒದಗಿಸಬೇಕು. ತ್ಯಾಜ್ಯ ಹಾಗೂ ಕಸ ಸಂಗ್ರಹಣೆ ವಾಹನಗಳು ನಿಯಮಿತವಾಗಿ ಕಸ ಸಂಗ್ರಹಿಸಬೇಕು ಎಂಬುದು ಸೇರಿದಂತೆ ಹಲವು ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು. 

  ಮುಖಂಡರ ಸಲಹೆ, ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಬಕ್ರೀದ್ ಹಬ್ಬದ ಶುಭಾಷಯಗಳನ್ನು ತಿಳಿಸಿದರು. ಪ್ರಸ್ತುತ ಕುಡಿಯುವ ನೀರನ್ನು ನಗರದ ಬಡಾವಣೆಗಳಿಗೆ ಪ್ರತಿ ಮೂರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಅವಶ್ಯವಿರುವೆಡೆ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವ ಮೂಲಕ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಕಸ ಸಂಗ್ರಹಿಸುವ ವಾಹನಗಳಿಗೆ ಹಸಿಕಸ ಹಾಗೂ ಒಣಕಸಗಳಾಗಿ ವಿಂಗಡಿಸಿ ನೀಡುವ ಮೂಲಕ ನಗರದ ಸ್ವಚ್ಚತೆ ಹಾಗೂ ನೈರ್ಮಲ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಧಾರ್ಮಿಕ ಹಬ್ಬಗಳು ಸೌಹಾರ್ದಯುತವಾಗಿ ನಡೆಯುತ್ತಿದೆ. ಸಾಮೂಹಿಕ ಪ್ರಾರ್ಥನೆ ಹಾಗೂ ಮೆರವಣಿಗೆ ಸಮಯದಲ್ಲಿ ಯುವಕರು ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸದೇ ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡಬೇಕು. ಅಪಘಾತಗಳಿಗೆ ಅವಕಾಶವಾಗದಂತೆ ತ್ರಿಬಲ್ ರೈಡಿಂಗ್ ಮಾಡಬಾರದು. ಹಬ್ಬದ ವೇಳೆ ಸಾಮಾಜಿಕ ಜಾಲತಾಣಗಳನ್ನು ಮಿತವಾಗಿ ಬಳಸಬೇಕು. ಈ ಬಗ್ಗೆ ಧಾರ್ಮಿಕ ಗುರುಗಳು ಯುವಕರಿಗೆ ಜಾಗೃತಿ ಮೂಡಿಸಬೇಕು. ಯಾವುದೇ ಅನಾಹುತ, ಅವಘಡ ಸಂಭವಿಸುವ ಮೊದಲು ಪೊಲೀಸರ ಗಮನಕ್ಕೆ ತರಬೇಕು ಎಂದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಶರವಣ, ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ವಿವಿಧ ಸಮುದಾಯದ ಮುಖಂಡರುಗಳಾದ ವಸೀಂ ಪಾಶ, ಆಯುಬ್ ಖಾನ್, ನಯಾಜ್ ಉಲ್ಲಾ, ಚಾ.ರಂ. ಶ್ರೀನಿವಾಸಗೌಡ, ಶಿವಣ್ಣ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.   

Leave a Reply

Your email address will not be published. Required fields are marked *