ನಾಳೆ ನಗರದಲ್ಲಿ ಜಿಲ್ಲಾ ಜಾನಪದ ಉತ್ಸವ

ಚಾಮರಾಜನಗರ : ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜಿಲ್ಲಾ ಜಾನಪದ ಉತ್ಸವವು ಮೇ ೨೪ ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಡಾ.ರಾಜಕುಮಾರ್ ಜಿಲ್ಲಾ ರಂಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪರಿಷತ್ನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ತಿಳಿಸಿದರು.
ಚಿಕ್ಕಲ್ಲೂರಿನ ಮಂಟೇಸ್ವಾಮಿ ಮಠದ ಭರತರಾಜೇ ಅರಸ್ ಸಾನಿಧ್ಯ ವಹಿಸುವರು. ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಪ್ರಸಿದ್ದ ನೀಲಗಾರರಾದ ಮೈಸೂರು ಡಾ.ಗುರುರಾಜು ಅವರಿಗೆ ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶಕುಮಾರ್ ಅವರು ಪರಂಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ ೧೨ ಗಂಟೆಗೆ ವಿಚಾರ ಸಂಕಿರಣ ನಡೆಯಲಿದೆ. ʼಸಮಕಾಲೀನ ಸಂದರ್ಭದಲ್ಲಿ ಜಾನಪದ ಪ್ರಸ್ತುತತೆ’ ಕುರಿತು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಾನಾಪುರ ಅವರು ವಿಚಾರ ಮಂಡಿಸುವರು. ʼಚಾಮರಾಜನಗರ ಜಿಲ್ಲೆಯ ಜನಪದ ಕಲೆಗಳ ವೈಶಿಷ್ಟ್ಯತೆʼ ವಿಷಯ ಕುರಿತು ಮೈಸೂರಿನ ಕರಾಮುವಿವಿಯ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪಿ. ಮಣಿ ಅವರು ವಿಷಯ ಮಂಡಿಸುವರು ಎಂದರು.
ಮಧ್ಯಾಹ್ನ ೩ಕ್ಕೆ ನಡೆಯುವ ಕಲಾವಿದರಿಂದ ವಿವಿಧ ಜಾನಪದ ಕಲೆಗಳ ಪ್ರದರ್ಶನಗಳು ಜರುಗಲಿದೆ. ಜಿಲ್ಲೆಯ ಜಾನಪದ ಕಲಾವಿದರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮದ್ರಾಸ್ ವಿಶ್ವವಿದ್ಯಾಲಯದ ಜಾನಪದ ವಿದ್ವಾಂಸ ಡಾ.ಎಂ.ರಂಗಸ್ವಾಮಿ ಸಮಾರೋಪ ಭಾಷಣ ನೆರವೇರಿಸುವರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸುವರು. ಚುಡಾದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಅವರು ಕಲಾವಿದರಿಗೆ ಪ್ರಮಾಣ ಪತ್ರ ವಿತರಣೆ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲೆ ನಟರಾಜು, ಕಲಾವಿದ ರವಿಚಂದ್ರಪ್ರಸಾದ್, ಎಸ್‌ಪಿಬಿ ಸಾಂಸ್ಕೃತಿಕ ಕಲಾಬಳಗದ ಶಿವಣ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು ಹಾಜರಿದ್ದರು.

Leave a Reply

Your email address will not be published. Required fields are marked *